ಉಡುಪಿ : ಆಸ್ತಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ತಮ್ಮನೇ ತನ್ನ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿ ನಡೆದಿದೆ.
ಕೊಲೆಗೀಡಾದವರನ್ನು ಸ್ಥಳೀಯ ನಿವಾಸಿ ರಿಚಾರ್ಡ್ ಡಿಸೋಜ(65) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಮೃತರ ತಮ್ಮ ಹೆರಾಲ್ಡ್ ಡಿಸೋಜ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರಿಚರ್ಡ್ ಡಿಸೋಜ ಮತ್ತು ಹೆರಾಲ್ಡ್ ಡಿಸೋಜ ಕಾರ್ಕಳ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿ ವಾಸವಾಗಿದ್ದು, ಈ ಮನೆ ಹಾಗೂ ಜಾಗದ ಬಗ್ಗೆ ಇವರಿಬ್ಬರ ಮಧ್ಯೆ ತಕರಾರು ಇತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ಹಿರಿಯಂಗಡಿ ಎಂಬಲ್ಲಿನ ಜಾಗದಲ್ಲಿ ಹೆರಾಲ್ಡ್ ಡಿಸೋಜ ಮತ್ತು ರಿಚಾರ್ಡ್ ಡಿಸೋಜ ಮಧ್ಯೆ ಗಲಾಟೆ ನಡೆದಿತ್ತು. ಆ ವೇಳೆ ಹೆರಾಲ್ಡ್ ಡಿಸೋಜ, ತನ್ನ ಅಣ್ಣ ರಿಚಾರ್ಡ್ ಡಿಸೋಜಗೆ ಮರದ ರೀಪಿನಿಂದ ಹೊಡೆದು ಕೊಲೆ ಮಾಡಿರುವುದಾಗಿ ಮೃತರ ಪತ್ನಿ ಜೆಸಿಂತ ಡಿಸೋಜ ದೂರಿನಲ್ಲಿ ತಿಳಿಸಿದ್ದಾರೆ.
ಅದರಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಆರೋಪಿ ಹೆರಾಲ್ಡ್ ಡಿಸೋಜನನ್ನು ಪೊಲೀಸ್ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಹರಿರಾಂ ಶಂಕರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ 4 ಅಡಿ ಎತ್ತರದ ಅಪರೂಪದ ಜಿಂಕೆ ಭೇಟೆಯ ವೀರಗಲ್ಲು ಪತ್ತೆ



















