ಉಡುಪಿ : ಕುಂದಾಪುರ ತಾಲೂಕಿನ ವಕ್ವಾಡಿ ದ್ಯಾಗಳ ಮನೆಯ ಆವರಣದ ಹೊರಭಾಗದಲ್ಲಿ ಸುಮಾರು 4 ಅಡಿ ಎತ್ತರದ ಬೇಟೆಯ ವೀರಗಲ್ಲು ಪತ್ತೆಯಾಗಿದೆ. ಮೂರು ಅಂಕಣಗಳನ್ನು ಒಳಗೊಂಡ ಈ ವೀರಗಲ್ಲಿನಲ್ಲಿ ಜಿಂಕೆ ಬೇಟೆಯ ಅಪರೂಪದ ಚಿತ್ರಣವಿದೆ ಎಂದು ಪುರಾತತ್ತ್ವ ಸಂಶೋಧಕ ಆದಿಮ ಕಲಾ ಟ್ರಸ್ಟ್‌ನ ಸ್ಥಾಪಕ ಸಂಚಾಲಕ ಪ್ರೊ.ಟಿ. ಮುರುಗೇಶಿ ತಿಳಿಸಿದ್ದಾರೆ.
ಇದು ತುಳುನಾಡಿನಲ್ಲಿ ಕಂಡುಬಂದ ಎರಡನೇ ಬೇಟೆಯ ವೀರಗಲ್ಲು ಶಾಸನವಾಗಿದೆ. ಮೊದಲನೇ ವೀರಗಲ್ಲು, ಹೆಬ್ರಿ ತಾಲೂಕಿನ ಸೋಮೇಶ್ವರ ದಲ್ಲಿದೆ. ಈ ಶಾಸನದಲ್ಲಿ ಚಿತ್ರಿತವಾಗಿರುವ ಕೊಂಬಿನ ಜಿಂಕೆಗಳು ಕೊಲ್ಲೂರಿನ ಶ್ರೀಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ಹೇರಳವಾಗಿವೆ. ಹಂದಿ ಬೇಟೆಯ ಶಿಲ್ಪಗಳು ಕರ್ನಾಟಕದಲ್ಲಿ ಸಾಕಷ್ಟು ಕಂಡುಬಂದಿವೆ. ಆದರೆ, ಜಿಂಕೆ ಬೇಟೆಯ ಶಿಲ್ಪಗಳು ಅತ್ಯಂತ ಅಪರೂಪ.
ಕಾಲಮಾನ:
ಈ ವೀರಗಲ್ಲಿನಲ್ಲಿ ಯಾವುದೇ ಬರವಣಿಗೆ ಇಲ್ಲ. ಕೇವಲ ಘಟನೆಯೊಂದರ ನಿರೂಪಾತ್ಮಕ ಶಿಲ್ಪಗಳಿವೆ. ಆದ್ದರಿಂದ ನಿಖರ ಕಾಲಮಾನವನ್ನು ನಿರ್ಣಯಿಸುವುದು ಅತ್ಯಂತ ಕಷ್ಟಕರ ಕೆಲಸ. ವೀರಗಲ್ಲಿನ ಶಿಲ್ಪಗಳ ಶೈಲಿಯ ಆಧಾರದ ಮೇಲೆ ಕಾಲವನ್ನು ನಿರ್ಧರಿಸಬೇಕಾಗುತ್ತದೆ. ವೀರಗಲ್ಲಿನ ಮೇಲಿನ ಪಟ್ಟಿಕೆಯಲ್ಲಿ ಚಿತ್ರತವಾದ ಶಿವಲಿಂಗ ಪ್ರಾತಿನಿಧಿಕವಾಗಿ 8-10ನೇ ಶತಮಾನದ ತುಳುನಾಡಿನ ಲಿಂಗಗಳನ್ನು ಹೋಲುತ್ತದೆ. ಆದ್ದರಿಂದ ಶಿಲ್ಪಶೈಲಿಯ ಆಧಾರದ ಮೇಲೆ ಸುಮಾರು 9-10ನೇ ಶತಮಾನದ, ಆಳುಪರ ಕಾಲದ ವೀರಗಲ್ಲು ಎಂದು ನಿರ್ಧರಿಸಬಹುದು ಎಂದು ಪ್ರೊ.ಮುರುಗೇಶಿ ಹೇಳಿದ್ದಾರೆ.
ಪ್ರಸ್ತುತ ಪತ್ತೆಯಾಗಿರುವ ಶಿಲ್ಪ ಸುಮಾರು 45 ಇಂಚು ಎತ್ತರ ಮತ್ತು 22.5 ಇಂಚು ಅಗಲ ಹೊಂದಿದ್ದು, ಈ ಚತುರ್ಭುಜಾಕಾರದ ಕಲ್ಲಿನ ಫಲಕದಲ್ಲಿ ಮೂರು ಹಂತಗಳ ಶಿಲ್ಪಾಕೃತಿಗಳು ಕೆತ್ತಲಾಗಿದೆ.ಕೆಳಭಾಗದಲ್ಲಿ ಇಬ್ಬರು ವೀರರು ಬೇಟೆ ನಾಯಿಗಳನ್ನು ಹಿಡಿದಿರುವ ದೃಶ್ಯವಿದ್ದು, ಮಧ್ಯಭಾಗದಲ್ಲಿ ಇಬ್ಬರು ಯೋಧರು—ಒಬ್ಬನು ಬಿಲ್ಲು ಮತ್ತು ಮತ್ತೊಬ್ಬನು ಬಾಣ ಹಿಡಿದು ಜಿಂಕೆಯ ಕುತ್ತಿಗೆಯನ್ನು ಗುರಿಯಾಗಿಸಿಕೊಂಡಿರುವ ದೃಶ್ಯ ಕಂಡು ಬಂದಿದೆ.ಇನ್ನು ಮೇಲ್ಭಾಗದಲ್ಲಿ ಲಿಂಗದ ಎರಡೂ ಬದಿಗಳಲ್ಲಿ ವೀರರು ಕುಳಿತು ನಮಸ್ಕಾರದ ಭಂಗಿ ಕುಳಿತಿರುವಂತೆ ಚಿತ್ರಿಸಲ್ಪಟ್ಟಿದ್ದು, ಅದರ ಮೇಲ್ಭಾಗದಲ್ಲಿ ದ್ರಾವಿಡ ಶೈಲಿಯ ವಿಮಾನದ ಚಿತ್ರಣವಿದೆ.
ಇದನ್ನೂ ಓದಿ : ರೇಣುಕಸ್ವಾಮಿ ಕೊಲೆ ಕೇಸ್ – ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್!



















