ನವದೆಹಲಿ : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಕೇಂದ್ರ ಸರ್ಕಾರಿ ನೌಕರರನ್ನು ನೇಮಕ ಮಾಡುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ (TMC) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಹೀಗಾಗಿ ಮಮತಾ ಬ್ಯಾನರ್ಜಿ ಅವರ ಪಕ್ಷಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ಮುಖಭಂಗ ಉಂಟಾಗಿದೆ. ಕೇಂದ್ರ ಸರ್ಕಾರಿ ನೌಕರರು ತಮಗೆ ವಿರುದ್ಧವಾಗಿ ಕೆಲಸ ಮಾಡುತ್ತಾರೆ ಎಂಬ ತೃಣಮೂಲ ಕಾಂಗ್ರೆಸ್‌ನ ವಾದದಲ್ಲಿ ಯಾವುದೇ ತರ್ಕವಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, “ಸರ್ಕಾರಿ ನೌಕರರ ಮೇಲೆ ನಂಬಿಕೆ ಇಡಿ” ಎಂದು ಕಿವಿಮಾತು ಹೇಳಿದೆ.
ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ
ಮತ ಎಣಿಕೆ ಮೇಲ್ವಿಚಾರಕರು ಮತ್ತು ಸಹಾಯಕರಾಗಿ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ವಲಯದ ಉದ್ದಿಮೆಗಳ (PSU) ನೌಕರರನ್ನು ನೇಮಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಈ ಹಿಂದೆ ಕಲ್ಕತ್ತಾ ಹೈಕೋರ್ಟ್ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಜೋಯ್ ಮಲ್ಯ ಬಾಗ್ಚಿ ಅವರಿದ್ದ ಪೀಠವು ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.
ಟಿಎಂಸಿ ವಾದಕ್ಕೆ ನ್ಯಾಯಾಲಯದ ತಪರಾಕಿ
ಟಿಎಂಸಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, “ಕೇಂದ್ರದ ನಾಮನಿರ್ದೇಶಿತ ವ್ಯಕ್ತಿಗಳನ್ನು ನೇಮಕ ಮಾಡುವುದು ರಾಜ್ಯ ಸರ್ಕಾರದ ಮೇಲೆ ಬೆರಳು ತೋರಿಸಿದಂತಲ್ಲವೇ?” ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಾಗ್ಚಿ, “ಅವರು ಕೇಂದ್ರದವರೋ ಅಥವಾ ರಾಜ್ಯದವರೋ ಎಂಬುದು ಮುಖ್ಯವಲ್ಲ, ಅದು ಚುನಾವಣಾ ಆಯೋಗದ ವಿವೇಚನೆಗೆ ಬಿಟ್ಟದ್ದು. ಮತ ಎಣಿಕೆ ಕೇಂದ್ರದಲ್ಲಿ ನಿಮ್ಮ ಏಜೆಂಟ್‌ಗಳು ಕೂಡ ಇರುತ್ತಾರೆ” ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಎಲ್ಲಾ ಸರ್ಕಾರಿ ನೌಕರರನ್ನು ಸಮಾನವಾಗಿ ನೋಡಬೇಕೆಂದು ನ್ಯಾಯಮೂರ್ತಿ ನರಸಿಂಹ ಅವರು ಸಿಬಲ್ ಅವರ ‘ಪ್ರಮಾಣಾನುಗುಣ ಪ್ರಾತಿನಿಧ್ಯ’ದ ವಾದವನ್ನು ತಳ್ಳಿಹಾಕಿದರು.
ಚುನಾವಣಾ ಆಯೋಗದ ಸ್ಪಷ್ಟನೆ
ರಾಜ್ಯ ಸರ್ಕಾರದ ಆತಂಕಗಳು ಆಧಾರರಹಿತ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಚುನಾವಣಾ ಆಯೋಗವು, ಮತ ಎಣಿಕೆ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರಿ ಅಧಿಕಾರಿಗಳು ಕೂಡ ಭಾಗಿಯಾಗಿರುತ್ತಾರೆ ಎಂದು ಸ್ಪಷ್ಟಪಡಿಸಿತು. ರಿಟರ್ನಿಂಗ್ ಆಫೀಸರ್ ರಾಜ್ಯ ಸರ್ಕಾರಿ ನೌಕರರಾಗಿದ್ದು, ಅವರಿಗೆ ಯಾವುದೇ ಹಂತದ ಸರ್ಕಾರಿ ನೌಕರರನ್ನು ನಿಯೋಜಿಸುವ ಅಧಿಕಾರ ಇರುತ್ತದೆ ಎಂದು ಆಯೋಗದ ಪರ ವಕೀಲರು ವಾದಿಸಿದರು. ಅಂತಿಮವಾಗಿ, ಈ ವಿಷಯದಲ್ಲಿ ಯಾವುದೇ ಹೆಚ್ಚಿನ ಕ್ರಮದ ಅಗತ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿತು.
ಇದನ್ನೂ ಓದಿ : ದೇಶಾದ್ಯಂತ ಮೊಬೈಲ್‌ಗಳಿಗೆ ತುರ್ತು ಸಂದೇಶ : ಅತ್ಯಾಧುನಿಕ ವಿಪತ್ತು ಮುನ್ನೆಚ್ಚರಿಕೆ ವ್ಯವಸ್ಥೆಗೆ ಚಾಲನೆ!



















