ಭೋಪಾಲ್ : ಮಧ್ಯಪ್ರದೇಶದ ಬರ್ಗಿ ಅಣೆಕಟ್ಟು ಬಳಿಯ ನರ್ಮದಾ ನದಿಯಲ್ಲಿ ಗುರುವಾರ ಸಂಭವಿಸಿದ ಭೀಕರ ಕ್ರೂಸ್ ಬೋಟ್ ದುರಂತದಲ್ಲಿ ಈವರೆಗೆ 9 ಮಂದಿ ಮೃತಪಟ್ಟಿದ್ದಾರೆ. ಹವಾಮಾನದಲ್ಲಾದ ದಿಢೀರ್ ಬದಲಾವಣೆ ಹಾಗೂ ಭೀಕರ ಬಿರುಗಾಳಿಗೆ ಸಿಲುಕಿ ಪ್ರವಾಸಿಗರಿದ್ದ ಬೋಟ್ ಮುಳುಗಡೆಯಾಗಿದ್ದು, ರಕ್ಷಣಾ ಪಡೆಗಳು ಶುಕ್ರವಾರ ಬೆಳಗ್ಗಿನವರೆಗೆ 24 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ. ರಕ್ಷಿಸಲ್ಪಟ್ಟವರ ಪೈಕಿ 17 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐದು ಮಕ್ಕಳು ಸೇರಿದಂತೆ ಇನ್ನೂ ಒಂಬತ್ತು ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕರುಳು ಹಿಂಡುವ ದೃಶ್ಯ
ದೆಹಲಿಯಿಂದ ಪ್ರವಾಸಕ್ಕೆ ಬಂದಿದ್ದ ನಾಲ್ವರ ಕುಟುಂಬವೊಂದು ಈ ದುರಂತದಲ್ಲಿ ಸಿಲುಕಿತ್ತು. ಇದರಲ್ಲಿ ತಾಯಿ ಮತ್ತು ಆಕೆಯ ನಾಲ್ಕು ವರ್ಷದ ಮಗ ಇಬ್ಬರೂ ಒಂದೇ ಲೈಫ್ ಜಾಕೆಟ್ ಧರಿಸಿ, ಮಗುವನ್ನು ಎದೆಗಪ್ಪಿಕೊಂಡ ಸ್ಥಿತಿಯಲ್ಲೇ ಇಬ್ಬರ ಮೃತದೇಹಗಳು ಶುಕ್ರವಾರ ಬೆಳಗ್ಗೆ ಪತ್ತೆಯಾಗಿವೆ. ಮಗುವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ತಾಯಿ ನಡೆಸಿದ ಕೊನೆಯ ಹತಾಶ ಪ್ರಯತ್ನದ ಈ ದೃಶ್ಯ ಎಂಥವರ ಕರುಳನ್ನೂ ಹಿಂಡುವಂತಿತ್ತು. ಅದೃಷ್ಟವಶಾತ್ ಇದೇ ಕುಟುಂಬದ ತಂದೆ ಮತ್ತು ಮಗಳು ಈ ಭೀಕರ ಅಪಘಾತದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಣ್ಣೆದುರೇ ಕಣ್ಮರೆಯಾದ ಕುಟುಂಬ
ಘಟನೆಯಿಂದ ಪಾರಾದ ಸೈಯದ್ ರಿಯಾಜ್ ಹುಸೇನ್ ಎಂಬುವವರು ತಮ್ಮ ಕಣ್ಣೆದುರೇ ನಡೆದ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ. ಹವಾಮಾನ ಇದ್ದಕ್ಕಿದ್ದಂತೆ ಹದಗೆಟ್ಟು ಬಲವಾದ ಬಿರುಗಾಳಿ ಬೀಸಲು ಪ್ರಾರಂಭಿಸಿದಾಗ, ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ತಮ್ಮ ಪತ್ನಿ, ಅತ್ತೆ ಮತ್ತು ಮೊಮ್ಮಗ ನೀರಿನಲ್ಲಿ ಕಣ್ಮರೆಯಾದರು ಎಂದು ಅವರು ರೋದಿಸಿದ್ದಾರೆ. ಬೋಟ್ ಸಮತೋಲನ ಕಳೆದುಕೊಂಡು ಕ್ಷಣಾರ್ಧದಲ್ಲಿ ನೀರು ತುಂಬಲಾರಂಭಿಸಿತು.
ದಿಕ್ಕುತೋಚದಂತಾದ ಪ್ರವಾಸಿಗರು ಪ್ರಾಣಭಯದಿಂದ ಚೀರಾಡುತ್ತಿದ್ದರು. ತಾವೂ ಕೂಡ ಮುಳುಗುತ್ತಿದ್ದು, ಸಾವು ಖಚಿತ ಎಂದೇ ಭಾವಿಸಿದ್ದಾಗಿ ಹುಸೇನ್ ತಿಳಿಸಿದ್ದಾರೆ. ಆದರೆ, ಪವಾಡದಂತೆ ಅವರು ಬದುಕುಳಿದಿದ್ದಾರೆ. ನೀರಿನ ಅಡಿ ಸಿಲುಕಿದ್ದರೂ ಅವರ ತಲೆ ಮಾತ್ರ ನೀರಿನ ಮೇಲಿದ್ದ ಕಾರಣ ಉಸಿರಾಡಲು ಸಾಧ್ಯವಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರನ್ನು ಕೊನೆಗೂ ರಕ್ಷಣಾ ತಂಡಗಳು ಗುರುತಿಸಿ ಕಾಪಾಡಿದವು. ಕಣ್ಣ ಮುಂದೆಯೇ ಮೃತದೇಹಗಳು ತೇಲಿಕೊಂಡು ಹೋಗುತ್ತಿದ್ದ ಭೀಕರ ದೃಶ್ಯವನ್ನು ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಪ್ರಸ್ತುತ ಹುಸೇನ್ ಅವರ ಕುಟುಂಬದವರೂ ನಾಪತ್ತೆಯಾದವರ ಪಟ್ಟಿಯಲ್ಲಿದ್ದಾರೆ.
ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ
ಸ್ಥಳೀಯ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದು, ನಾಪತ್ತೆಯಾದವರಿಗಾಗಿ ಸಮರೋಪಾದಿಯಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಲೈಫ್ ಜಾಕೆಟ್ ಧರಿಸಿದ್ದ ಕ್ರೂಸ್ ಕ್ಯಾಪ್ಟನ್ ಮಹೇಶ್ ಪಟೇಲ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕತ್ತಲಾದ ಕಾರಣ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ಶುಕ್ರವಾರ ಬೆಳಗಾಗುತ್ತಲೇ ಮತ್ತೆ ಬಿರುಸುಗೊಂಡಿದೆ.
ಇದನ್ನೂ ಓದಿ : ಪ್ರೀತಿಸುವುದಾಗಿ ನಂಬಿಸಿ ‘ಕೈ’ಕೊಟ್ಟ ಕಾಂಗ್ರೆಸ್ ಮುಖಂಡ – ಲೈಂಗಿಕ ಸಂಪರ್ಕದ ಬಳಿಕ ಯುವತಿಗೆ ವಂಚನೆ!



















