ಬೆಂಗಳೂರು : ನಗರದಲ್ಲಿರುವ Dream & Deals International Private Limited ಕಂಪನಿ ವಿರುದ್ದ ಟ್ರೇಡಿಂಗ್ ಮಾದರಿಯ ಆನ್‌ಲೈನ್ ಹಣಕಾಸು ವ್ಯವಹಾರಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದು, ಇದೊಂದು ಮೋಸದ ಜಾಲವಾಗಿರುವ ಸಾಧ್ಯತೆ ಬಗ್ಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ.
‘ಡ್ರೀಮ್ & ಡೀಲ್’ ಕಂಪನಿಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭದ ಭರವಸೆ ನೀಡುತ್ತಾ ಜನರಿಂದ ಹಣ ಸಂಗ್ರಹಿಸುತ್ತಿರುವ ಯೋಜನೆಗಳು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿವೆ. ವಿಶೇಷವಾಗಿ ಯುವಕರು ಹಾಗೂ ಉದ್ಯೋಗ ಅರಸುತ್ತಿರುವವರನ್ನು ಗುರಿಯಾಗಿಸಿಕೊಂಡು “ರಿಕ್ರೂಟ್‌ಮೆಂಟ್” ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿರುವ ಬಗ್ಗೆ ದೂರುಗಳು ಹೆಚ್ಚುತ್ತಿವೆ. ಹೀಗಾಗಿ ದಿನೇಶ್ ಕಲ್ಲಹಳ್ಳಿ ಅವರು ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ದಿನೇಶ್ ಕಲ್ಲಹಳ್ಳಿ ಅವರು ರಾಜ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ದೂರಿನಲ್ಲಿ M/s Dream & Deals International Private Limited ಹೆಸರಿನಲ್ಲಿ ನಡೆಯುತ್ತಿರುವ ಟ್ರೇಡಿಂಗ್ ಚಟುವಟಿಕೆಗಳು ಕಾನೂನುಬಾಹಿರವಾಗಿವೆ ಎಂದು ಉಲ್ಲೇಖಿಸಲಾಗಿದೆ. ಕಂಪನಿ ನಾಮಧೇಯದಲ್ಲಿ ಹಣ ಹೂಡಿಕೆ ಮಾಡಿಸಿದ ಬಳಿಕ ಹೆಚ್ಚಿನ ಲಾಭ ನೀಡುವುದಾಗಿ ಹೇಳಿ ಜನರನ್ನು ಆಕರ್ಷಿಸಲಾಗುತ್ತಿದ್ದು, ವಾಸ್ತವದಲ್ಲಿ ಯಾವುದೇ ಮಾನ್ಯ ಹಣಕಾಸು ನಿಯಂತ್ರಣ ಸಂಸ್ಥೆಗಳ ಅನುಮತಿ ಇಲ್ಲದೆ ಈ ಚಟುವಟಿಕೆ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಇದು ಪಾಂಜಿ ಅಥವಾ ಮಲ್ಟಿ-ಲೆವೆಲ್ ಮೋಸದ ಮಾದರಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಯಾವುದೇ ಸಂಸ್ಥೆ, ವಿಶೇಷವಾಗಿ ಹೂಡಿಕೆ ಸಂಬಂಧಿತ ವ್ಯವಹಾರ ನಡೆಸುವ ಸಂಸ್ಥೆಗಳು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಾಗೂ SEBI ನಿಯಮಾವಳಿಗಳಡಿ ನೋಂದಣಿ ಹೊಂದಿರಬೇಕು. ಆದರೆ ಈ ಸಂಸ್ಥೆಯು ಅಂತಹ ಮಾನ್ಯತೆ ಹೊಂದಿದೆಯೇ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಇದೇ ಕಾರಣದಿಂದಾಗಿ ಇದು Companies Act, 2013, Unregulated Deposit Schemes (Banning) Act, 2019, ಹಾಗೂ Prize Chits and Money Circulation Schemes (Banning) Act, 1978 ಉಲ್ಲಂಘನೆಯಾಗಿರುವ ಕುರಿತು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಯುವಕರಿಗೆ ಉದ್ಯೋಗ ನೀಡುವ ಹೆಸರಿನಲ್ಲಿ ಟ್ರೇಡಿಂಗ್ ಕೆಲಸಗಳತ್ತ ಒಲೈಸಿ, ನಂತರ ಹೂಡಿಕೆ ಮಾಡಲು ಒತ್ತಾಯಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. “ಟ್ರೇಡಿಂಗ್” ತರಬೇತಿ, ಡಿಜಿಟಲ್ ಕೆಲಸ, ಹೈ ರಿಟರ್ನ್ ಯೋಜನೆಗಳು ಎಂಬ ಆಮಿಷಗಳಿಂದ ಹಣ ಪಡೆದು ಬಳಿಕ ಯಾವುದೇ ಸ್ಪಷ್ಟ ಆದಾಯ ನೀಡದಿರುವ ಘಟನೆಗಳು ವರದಿಯಾಗಿವೆ. ಇದರ ಪರಿಣಾಮವಾಗಿ ಹಲವರು ತಮ್ಮ ಸಂಗ್ರಹ ಹಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಿತ ಇಲಾಖೆ ತಕ್ಷಣವೇ ಸಮಗ್ರ ತನಿಖೆ ಕೈಗೊಳ್ಳಬೇಕು, ಕಂಪನಿಯ ಹಣಕಾಸು ವ್ಯವಹಾರಗಳು, ಲೈಸೆನ್ಸ್‌ಗಳು ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಿದ ಹಣದ ಮೂಲ-ಬಳಕೆಯನ್ನು ಪರಿಶೀಲಿಸಬೇಕು ಎಂದು ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ. ಜೊತಗೆ ತಪ್ಪು ಕಂಡುಬಂದಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ ; ಧೂಮಪಾನ ವಿವಾದದಿಂದ ಪಾರಾದ ರಿಯಾನ್ ಪರಾಗ್ ; IPL ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಂಡ BCCI



















