ರಾಮನಗರ : ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೆಟ್ರೋಲ್ ಬಾಂಬ್ ಮಾದರಿಯ ವಸ್ತು ಬ್ಲಾಸ್ಟ್ ಆಗುವ ದೃಶ್ಯ ಹೊಂದಿರುವ ರೀಲ್ಸ್ ಮಾಡಿರುವ ಬಗ್ಗೆ ರಜತ್ ವಿರುದ್ಧ ಕನಕಪುರದ ಕಗ್ಗಲೀಪುರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ರಜತ್, ಇತ್ತೀಚೆಗೆ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಈ ರೀಲ್ಸ್ ಅಪ್ಲೋಡ್ ಮಾಡಿದ್ದರು. ಬೈಕ್ನಲ್ಲಿ ಸ್ಟೈಲ್ ಆಗಿ ಬರುವ ರಜತ್ ಹಿಂದೆ ಪೆಟ್ರೋಲ್ ಬಾಂಬ್ ಮಾದರಿಯ ವಸ್ತು ಸ್ಫೋಟವಾಗುವ ದೃಶ್ಯ ಇದಾಗಿತ್ತು. ಆ ರೀಲ್ಸ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ತಮ್ಮ ತಪ್ಪು ಅರಿತು ರಜತ್ ಕ್ಷಮೆ ಸಹ ಕೇಳಿದ್ದರು. ಆದರೀಗ, ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ರಸ್ತೆಯ ವಡೇರಹಳ್ಳಿಯ ಸಾರ್ವಜನಿಕ ರಸ್ತೆಯಲ್ಲಿ ರಜತ್ ಹಾಗೂ ತಂಡ ರೀಲ್ಸ್ ಶೂಟ್ ಮಾಡಿದ್ದರು. ರೀಲ್ಸ್ ಆಕರ್ಷಕವಾಗಿ ಮೂಡಿ ಬರಲೆಂದು ಬ್ಲಾಸ್ಟ್ ಸಹ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಗ್ಗಲೀಪುರ ಪೊಲೀಸರು ರಜತ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಅಲ್ಲದೆ, ಇದೇ ದಿನ ರಜತ್, ರೀಲ್ಸ್ ಶೂಟಿಂಗ್ ಮಾಡಿದ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ತನಿಖೆಯನ್ನು ಸಹ ನಡೆಸಿದ್ದಾರೆ. ಇನ್ನು ರಜತ್ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ 10 ಮಂದಿಯನ್ನು ಬಲಿ ಪಡೆದ ‘ರಕ್ಕಸ’ ಮಳೆ – ಅಮ್ಮನ ಎದುರೇ ಪ್ರಾಣ ಬಿಟ್ಟ ಮಗ!



















