ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನದಲ್ಲೂ ಹಿಂಸಾಚಾರ, ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ದೋಷ ಹಾಗೂ ರಾಜಕೀಯ ನಾಯಕರ ತೀವ್ರ ವಾಕ್ಸಮರಗಳು ವರದಿಯಾಗಿವೆ. ಚುನಾವಣಾ ಆಯೋಗದ ವಿವಾದಾತ್ಮಕ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ಪ್ರಕ್ರಿಯೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಕಾವೇರಿದ ಚುನಾವಣೆಯಲ್ಲಿ, ಕೇಂದ್ರ ಭದ್ರತಾ ಪಡೆಗಳು ಉಗ್ರರಂತೆ ವರ್ತಿಸುತ್ತಿವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
ಎಲ್ಲೆಲ್ಲಿ ಏನೇನಾಯ್ತು?
ಚಾಪ್ರಾ, ಶಾಂತಿಪುರ ಮತ್ತು ಭಾಂಗರ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇಂದು ಮುಂಜಾನೆಯಿಂದಲೇ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳು ವರದಿಯಾಗಿವೆ. ಎಂಟಾಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಅವರ ಪ್ರತಿನಿಧಿಯನ್ನು ಸ್ಥಳಾವಕಾಶದ ಕೊರತೆಯ ನೆಪವೊಡ್ಡಿ ಮತಗಟ್ಟೆಯಿಂದ ಹೊರಹಾಕಿದ ಘಟನೆಗೆ ಸಂಬಂಧಿಸಿದಂತೆ, ಭದ್ರತಾ ಸಿಬ್ಬಂದಿ ಹಾಗೂ ಚುನಾವಣಾ ಅಧಿಕಾರಿಗಳ ನಡುವೆ ತೀವ್ರ ವಾಗ್ವಾದ ನಡೆದಿದೆ.
ಇತ್ತ ನಾಡಿಯಾ ಜಿಲ್ಲೆಯ ಚಾಪ್ರಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ತೃಣಮೂಲ ಕಾಂಗ್ರೆಸ್ ಬೆಂಬಲಿತ ದುಷ್ಕರ್ಮಿಗಳು ತಮ್ಮ ಚುನಾವಣಾ ಏಜೆಂಟ್ ಮೊಶರೆಫ್ ಮಿರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಬಂದೂಕು ಮತ್ತು ರಾಡ್‌ಗಳಿಂದ ಹಲ್ಲೆಗೊಳಗಾಗಿರುವ ಮಿರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಆದರೆ, ಈ ಘಟನೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಟಿಎಂಸಿ ಸ್ಪಷ್ಟಪಡಿಸಿದೆ. ಇದರ ಜೊತೆಗೆ ಶಾಂತಿಪುರದಲ್ಲಿ ಬಿಜೆಪಿ ಶಿಬಿರದ ಪೀಠೋಪಕರಣಗಳನ್ನು ಧ್ವಂಸಗೊಳಿಸಲಾಗಿದ್ದರೆ, ಭಾಂಗರ್‌ನಲ್ಲಿ ಐಎಸ್‌ಎಫ್ (ಇಂಡಿಯನ್ ಸೆಕ್ಯುಲರ್ ಫ್ರಂಟ್) ಪ್ರತಿನಿಧಿಯನ್ನು ಮತಗಟ್ಟೆ ಪ್ರವೇಶಿಸದಂತೆ ತಡೆಯಲಾಗಿದೆ. ಈ ನಡುವೆ ಭದ್ರತಾ ಸಿಬ್ಬಂದಿ ವ್ಯಕ್ತಿಯೊಬ್ಬನನ್ನು ಎಳೆದುಕೊಂಡು ಹೋಗಿ ಥಳಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಕೇಂದ್ರ ಪಡೆಗಳ ವಿರುದ್ಧ ಮಮತಾ ಆಕ್ರೋಶ
ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಘರ್ಷಣೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಭದ್ರತಾ ಪಡೆಗಳು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ. ಹೊರಗಿನಿಂದ ಬಂದಿರುವ ವೀಕ್ಷಕರು ಬಿಜೆಪಿಯ ಕೈಗೊಂಬೆಗಳಾಗಿದ್ದಾರೆ ಎಂದು ಟೀಕಿಸಿರುವ ಅವರು, “ಮತ ಚಲಾಯಿಸಬೇಕಾದದ್ದು ಮತದಾರರೇ ಹೊರತು ಭದ್ರತಾ ಪಡೆಗಳಲ್ಲ.
ಹೊಸದಾಗಿ ಬಂದಿರುವ ಕೆಲವರು ಇಲ್ಲಿ ಉಗ್ರವಾದವನ್ನು ಸೃಷ್ಟಿಸುತ್ತಿದ್ದಾರೆ” ಎಂದು ಗುಡುಗಿದ್ದಾರೆ. ಭವಾನಿಪುರ ಕ್ಷೇತ್ರದಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕೂಡ, ವೀಕ್ಷಕರು ತಮ್ಮ ಮಿತಿಯನ್ನು ಮೀರಿ ವರ್ತಿಸುತ್ತಿದ್ದಾರೆ ಎಂದು ದೂರಿದ್ದಾರೆ. ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಸುವೇಂದು ಅಧಿಕಾರಿ ನಡುವೆ ಭಾರೀ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.
ಅಲ್ಲಲ್ಲಿ ಇವಿಎಂ ದೋಷ
ಚುನಾವಣಾ ಅಕ್ರಮಗಳ ಆರೋಪದ ನಡುವೆ ಹೌರಾ ಸೇರಿದಂತೆ ಕೆಲವು ಕಡೆಗಳಲ್ಲಿ ಇವಿಎಂ ಕೈಕೊಟ್ಟಿರುವ ಬಗ್ಗೆಯೂ ವರದಿಯಾಗಿದೆ. ಇವಿಎಂ ಮೂಲಕ ಬಿಜೆಪಿ ತಿರುಚುವಿಕೆ ಮಾಡುತ್ತದೆ ಎಂದು ಪ್ರತಿಪಕ್ಷಗಳು ಮೊದಲಿನಿಂದಲೂ ಆರೋಪಿಸುತ್ತಿವೆ, ಆದರೆ ಆಯೋಗವು ಯಂತ್ರಗಳ ಸುರಕ್ಷತೆಯನ್ನು ಸಮರ್ಥಿಸಿಕೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಚುನಾವಣಾ ಆಯೋಗವು ಕೈಗೊಂಡಿದ್ದ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ಪ್ರಕ್ರಿಯೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮೃತಪಟ್ಟವರ, ನಕಲಿ ಹಾಗೂ ವಲಸೆ ಹೋದವರ ಹೆಸರನ್ನು ತೆಗೆದುಹಾಕುವ ನೆಪದಲ್ಲಿ ಬರೋಬ್ಬರಿ 90.8 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದು ಟಿಎಂಸಿ ಬೆಂಬಲಿಗರನ್ನು ವ್ಯವಸ್ಥಿತವಾಗಿ ಹೊರಗಿಡುವ ಬಿಜೆಪಿಯ ಹುನ್ನಾರ ಎಂದು ಆಡಳಿತ ಪಕ್ಷ ಆರೋಪಿಸಿದೆ. ಏಪ್ರಿಲ್ 23ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ. 92.88ರಷ್ಟು ದಾಖಲೆಯ ಮತದಾನವಾಗಿತ್ತು. ಮೇ 4ರಂದು ಎರಡೂ ಹಂತಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲೇ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ.. ಮನೆ ಮೇಲೆ ಕಲ್ಲು ತೂರಾಟ!



















