ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ಅಕ್ರಮ ಸಂಬಂಧದ ವಿಚಾರವಾಗಿ ಅಪ್ರಾಪ್ತ ಮಕ್ಕಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಬೆಂಗಳೂರು ಉತ್ತರ ಜಿಲ್ಲಾ ಡಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಆನಂದ್ ನಾಯ್ಡು ಎಂಬಾತನ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ರಾಘವೇಂದ್ರ ಎಂಬುವವರ ಪತ್ನಿಯ ಜೊತೆ ಕಾಂಗ್ರೆಸ್ ಮುಖಂಡ ಆನಂದ್ ನಾಯ್ಡು ಕಳೆದ ಮೂರು-ನಾಲ್ಕು ವರ್ಷ ಗಳಿಂದ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರವನ್ನು ರಾಘವೇಂದ್ರ ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಆನಂದ್ ನಾಯ್ಡು, ರಾಘವೇಂದ್ರ ಅವರ ಅಪ್ರಾಪ್ತ ಮಕ್ಕಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಕಬ್ಬಿಣದ ರಾಡ್‌ನಿಂದ ಮಕ್ಕಳ ಕಾಲು ಹಾಗೂ ಮೈಮೇಲೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಲ್ಲದೆ, ಮಕ್ಕಳಿಗೆ ಕಚ್ಚಿ ವಿಕೃತಿ ಮೆರೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಕ್ಕಳ ಮೇಲಿನ ಹಲ್ಲೆ ಮಾತ್ರವಲ್ಲದೆ, ಪತಿ ರಾಘವೇಂದ್ರ ಅವರ ಒಪ್ಪಿಗೆ ಇಲ್ಲದೆಯೇ ಅವರ ಪತ್ನಿ ಮತ್ತು ಆನಂದ್ ನಾಯ್ಡು ಸೇರಿಕೊಂಡು ಆಸ್ತಿಯನ್ನು ಬರೆಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸದ್ಯ ಮಕ್ಕಳ ಹೇಳಿಕೆ ಹಾಗೂ ತಂದೆಯ ದೂರಿನ ಅನ್ವಯ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆನಂದ್ ನಾಯ್ಡು ವಿರುದ್ಧ ಪೊಕ್ಸೋ (POCSO) ಕಾಯ್ದೆ ಹಾಗೂ ಹಲ್ಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ರಾಜಕೀಯ ಪ್ರಭಾವ ಬಳಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಮುಖಂಡನ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಐತಿಹಾಸಿಕ ಕನಿಷ್ಠ ಮೊತ್ತದ ಮುಖಭಂಗದಿಂದ ಪಾರಾದ ಡೆಲ್ಲಿ ಕ್ಯಾಪಿಟಲ್ಸ್ ; ಅಭಿಮಾನಿಗಳು ಖುಷ್!



















