ಉಡುಪಿ/ಕುಂದಾಪುರ : ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ನಡವಳಿಕೆಯಲ್ಲಿ ಸಾಮ್ಯತೆ ಇರುವುದು ಸಹಜ. ಆದರೆ, ಕುಂದಾಪುರದ ಈ ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ನಾವು ‘ಸೇಮ್ ಟು ಸೇಮ್’ ಎಂದು ಸಾಬೀತುಪಡಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಈ ಅವಳಿ ಸಹೋದರಿಯರು ಸಮಾನ ಅಂಕ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಪಬ್ಲಿಕ್ ಸ್ಕೂಲ್ ವಂಡ್ಸೆ-ನೆಂಪುವಿನ ವಿದ್ಯಾರ್ಥಿನಿಯರಾದ ಸಮೀಕ್ಷಾ ಎಸ್. ಪೂಜಾರಿ ಮತ್ತು ಪ್ರತೀಕ್ಷಾ ಎಸ್. ಪೂಜಾರಿ ಈ ಅಪರೂಪದ ಸಾಧನೆ ಮಾಡಿದ ಸಾಧಕಿಯರು. ಪ್ರಕಟಗೊಂಡ ಫಲಿತಾಂಶದಲ್ಲಿ ಇಬ್ಬರೂ ಕೂಡಾ ನಿಖರವಾಗಿ 602 ಅಂಕಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಇಬ್ಬರು ವಿದ್ಯಾರ್ಥಿನಿಯರು ಬಸ್ರೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸಂತೋಷ್ ಮತ್ತು ಪ್ರೇಮಾ ದಂಪತಿಯ ಪುತ್ರಿಯರು. ತಮ್ಮ ಪ್ರಾಥಮಿಕ ಹಂತದಿಂದಲೇ ಸರ್ಕಾರಿ ಶಾಲೆಯಲ್ಲೇ ಓದಿ ಬೆಳೆದ ಈ ಇಬ್ಬರು ಪ್ರತಿಭೆಗಳ ಅಂಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಸಾಧಕಿಯರಿಗೆ ಅಭಿನಂದನೆಗಳ ಸುರಿಮಳೆಗರೆಯುತ್ತಿದ್ದಾರೆ.
ಈ ಬಾರಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿದ 2025-26ನೇ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ-1ರಲ್ಲಿ ರಾಜ್ಯಾದ್ಯಂತ 94.10 ಶೇಕಡಾ ದಾಖಲೆ ಫಲಿತಾಂಶ ದಾಖಲಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ 98.40 ಶೇಕಡಾ ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, 98 ಶೇಕಡಾ ಫಲಿತಾಂಶ ದಾಖಲಿಸಿದ ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ.
ಇನ್ನು, ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳ 7 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಉಡುಪಿ, ಚಿಕ್ಕೋಡಿ, ದಾವಣಗೆರೆ, ಚಿಕ್ಕಮಗಳೂರು, ಬೆಂಗಳೂರು ಉತ್ತರ, ವಿಜಯಪುರ ಮತ್ತು ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.
625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿ:
- ಅಥಣಿ ತಾಲೂಕಿನ ಕಟಗೇರಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಪಾಟೀಲ್
- ದಾವಣಗೆರೆಯ ಚನ್ನಗಿರಿ ತಾಲೂಕಿನ ಕಬ್ಬಾಳ ಶ್ರೀವಿದ್ಯಾಲಕ್ಷ್ಮೀ ಹೈಸ್ಕೂಲ್ನ ಭರತ್ ಜಿ
- ಚಿಕ್ಕಮಗಳೂರು ತಾಲೂಕಿನ ಸೇಂಟ್ ಮೇರಿ ಹೈಸ್ಕೂಲ್ನ ಬೃಂದಾ ಎಂ ತಾಪ್ಸೆ
- ಬೆಂಗಳೂರು ಉತ್ತರದ ಪೂರ್ಣಪ್ರಜ್ಞಾ ಶಾಲೆಯ ಧನುಷ್ ಸುದೀರ್
- ಉಡುಪಿಯ ಕುಂದಾಪುರ ತಾಲೂಕಿನ ಮದರ್ ತೆರೇಸಾ ಶಾಲೆಯ ಪ್ರೀಥಮ್ ಜಿ ಪೂಜಾರ್
- ವಿಜಯಪುರದ ಮುದ್ದೇಬಿಹಾಳ ತಾಲೂಕಿನ ನಗರಬೆಟ್ಟದ ಆಕ್ಸ್‌ಫರ್ಡ್ ಹೈಸ್ಕೂಲ್ನ ಸೌಜನ್ಯ ಬಸವರಾಜ್ ಕಂದಕೂರ್
- ರಾಯಚೂರು-ಮಾನ್ವಿಯ ಬಿವಿಆರ್ ಹೈಸ್ಕೂಲ್ನ ಸುಖದೇವ್
ಇದನ್ನೂ ಓದಿ : ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!



















