ಹಾಸನ: ನಿಡುಡಿ ಗ್ರಾಮದಲ್ಲಿ ಹಾಡಹಗಲೇ ಜನ ಸಂಚರಿಸುವ ರಸ್ತೆಯಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿವೆ. ರಾತ್ರಿ ವೇಳೆ ಗ್ರಾಮದೊಳಗೆ ಮತ್ತು ಹಗಲು ಹೊತ್ತಿನಲ್ಲಿ ಜಮೀನುಗಳಲ್ಲಿ ಈ ಜೋಡಿ ಚಿರತೆಗಳು ಓಡಾಡುತ್ತಿದ್ದು, ಬೀದಿನಾಯಿಗಳು ಮತ್ತು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿವೆ.
ಚಿರತೆಗಳ ಸಂಚಾರದಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಎದುರಾಗಿದ್ದು, ಜಮೀನುಗಳಿಗೆ ತೆರಳಲು ರೈತರಿಗೆ ಜೀವಭಯ ಕಾಡುತ್ತಿದೆ. ಅಲ್ಲದೆ ಮಕ್ಕಳು ಹಾಗೂ ವಯೋವೃದ್ಧರು ಮನೆಯಿಂದ ಹೊರಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವ ಮೂಲಕ ಜನರ ಜೀವ ಮತ್ತು ಜಾನುವಾರುಗಳನ್ನು ರಕ್ಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


















