ಬೆಂಗಳೂರು: ಮನೆ ಕೊಡುವುದಾಗಿ ನಂಬಿಸಿ ಗ್ರಾಹಕರಿಗೆ 1,305 ಕೋಟಿ ರೂಪಾಯಿ ವಂಚಿಸಿದ ಓಝೂನ್ ಗ್ರೂಪ್ಗೆ ಜಾರಿ ನಿರ್ದೇಶನಾಲಯ ಬಿಗ್ ಶಾಕ್ ನೀಡಿದೆ. ಫ್ಲ್ಯಾಟ್ ನೀಡದೆ ಕೋಟಿ ಕೋಟಿ ಹಣ ಗುಳುಂ ಮಾಡಿದ್ದ ಕಂಪನಿಯ ಎಂಡಿ ಎಸ್. ವಾಸುದೇವನ್ಗೆ ಈಗ ಸಂಕಷ್ಟ ಎದುರಾಗಿದೆ. ವಸತಿ ಯೋಜನೆ ಹೆಸರಿನಲ್ಲಿ ಹಣ ಸಂಗ್ರಹಿಸಿ ಅದನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದ್ದ ಆರೋಪ ಕಂಪನಿಯ ಮೇಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಇ.ಡಿ. ಅಧಿಕಾರಿಗಳು ಪಿಎಂಎಲ್ಎ ಕಾಯ್ದೆಯಡಿ ಬರೋಬ್ಬರಿ 702.70 ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾಟ್ ಮತ್ತು ಜಮೀನುಗಳನ್ನು ಜಪ್ತಿ ಮಾಡಿದ್ದಾರೆ. ಈ ಹಿಂದೆ 423.37 ಕೋಟಿ ರೂಪಾಯಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಈ ಮೂಲಕ ಪ್ರಕರಣದಲ್ಲಿ ಒಟ್ಟು 1,126 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಇ.ಡಿ. ಜಪ್ತಿ ಮಾಡಿದಂತಾಗಿದೆ. ಕಷ್ಟಪಟ್ಟು ದುಡಿದ ಹಣ ಕಳೆದುಕೊಂಡು ಬೀದಿಗೆ ಬಿದ್ದಿರುವ ಖರೀದಿದಾರರಿಗೆ ಈಗ ನ್ಯಾಯ ಸಿಗುತ್ತಾ ಎಂಬ ಪ್ರಶ್ನೆ ಮೂಡಿದೆ.

















