ನವದೆಹಲಿ : ದೆಹಲಿಯಲ್ಲಿ ಬುಧವಾರ ಬೆಳಿಗ್ಗೆ ಮನೆಯ ಮಾಜಿ ಕೆಲಸಗಾರನಿಂದಲೇ ಬರ್ಬರವಾಗಿ ಹತ್ಯೆಗೀಡಾದ ಐಆರ್‌ಎಸ್ ಅಧಿಕಾರಿಯ 22 ವರ್ಷದ ಪುತ್ರಿಯ ಮರಣೋತ್ತರ ಪರೀಕ್ಷೆಯ ವರದಿಯು ಹಲವು ಬೆಚ್ಚಿಬೀಳಿಸುವ ಸತ್ಯಗಳನ್ನು ಬಹಿರಂಗಪಡಿಸಿದೆ. ಮನೆಯ ಮಾಜಿ ಕೆಲಸಗಾರ ರಾಹುಲ್ ಮೀನಾ ಎಂಬಾತನೇ ಈ ಕೃತ್ಯವೆಸಗಿದ್ದು, ಹತ್ಯೆಗೂ ಮುನ್ನ ಯುವತಿ ತನ್ನ ಪ್ರಾಣ ಉಳಿಸಿಕೊಳ್ಳಲು ತೀವ್ರವಾಗಿ ಹೋರಾಡಿರುವುದು ಶವಪರೀಕ್ಷೆಯ ವರದಿಯಿಂದ ದೃಢಪಟ್ಟಿದೆ.
ಯುವತಿಯ ಮುಖದ ಮೇಲೆ ಮೊಂಡಾದ ಆಯುಧದಿಂದ ಹಲ್ಲೆ ನಡೆಸಲಾಗಿದ್ದು, ಮೂಗಿನ ಮೂಳೆ ಮುರಿದಿರುವುದು ಪತ್ತೆಯಾಗಿದೆ. ಆಕೆಯ ಕೈ ಮತ್ತು ಕಾಲುಗಳ ಮೇಲಿರುವ ಗಾಯದ ಗುರುತುಗಳು ಹಾಗೂ ತರಚಿದ ಗಾಯಗಳು ದಾಳಿಕೋರನ ವಿರುದ್ಧ ಆಕೆ ನಡೆಸಿದ ತೀವ್ರ ಪ್ರತಿರೋಧವನ್ನು ಸೂಚಿಸುತ್ತವೆ.
ಉಸಿರುಗಟ್ಟಿಸಿ ಕೊಲೆ
ಕತ್ತಿನ ಸ್ನಾಯುಗಳಲ್ಲಿ ರಕ್ತಸ್ರಾವ ಹಾಗೂ ಥೈರಾಯ್ಡ್ ಕಾರ್ಟಿಲೆಜ್‌ನ ಭಾಗಗಳಲ್ಲಿ ಮುರಿತ ಉಂಟಾಗಿರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ. ಮೊಬೈಲ್ ಚಾರ್ಜಿಂಗ್ ಕೇಬಲ್ ಬಳಸಿ ಯುವತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಇದರಿಂದ ಸ್ಪಷ್ಟವಾಗಿದೆ. ಹತ್ಯೆಗೂ ಮುನ್ನ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಕೆಯ ಉಗುರಿನ ಮಾದರಿ, ರಕ್ತ ಹಾಗೂ ಇತರ ಆಂತರಿಕ ಅಂಗಾಂಗಗಳ ಮಾದರಿಗಳನ್ನು ಹೆಚ್ಚಿನ ವಿಧಿವಿಜ್ಞಾನ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಹಲ್ಲೆಗೊಳಗಾಗಿ ಯುವತಿ ಪ್ರಜ್ಞೆ ತಪ್ಪಿದ ಬಳಿಕ ಆರೋಪಿಯು ಅತ್ಯಾಚಾರ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕೊಲೆಯ ಬಳಿಕ ಕಳ್ಳತನ
ಯುವತಿಯ ಪೋಷಕರು ಜಿಮ್‌ಗೆ ತೆರಳಿದ್ದ ಸಮಯವನ್ನು ಗಮನದಲ್ಲಿಟ್ಟುಕೊಂಡು, ಆರೋಪಿ ರಾಹುಲ್ ಮೀನಾ ತನ್ನಲ್ಲಿದ್ದ ಮನೆಯ ನಕಲಿ ಕೀಯನ್ನು ಬಳಸಿ ಒಳಪ್ರವೇಶಿಸಿದ್ದಾನೆ. ಯುವತಿಯನ್ನು ಕೊಲೆ ಮಾಡಿದ ಬಳಿಕ, ಆಕೆ ನಾಗರಿಕ ಸೇವಾ (ಯುಪಿಎಸ್‌ಸಿ) ಪರೀಕ್ಷೆಗೆ ಓದುತ್ತಿದ್ದ ಮಹಡಿಯ ಮೇಲಿನ ಕೊಠಡಿಯಿಂದ ಕೆಳಮಹಡಿಗೆ ಶವವನ್ನು ಎಳೆತಂದು ಲಾಕರ್ ತೆರೆಯಲು ಆಕೆಯ ಬೆರಳಚ್ಚು ಬಳಸಲು ಯತ್ನಿಸಿದ್ದಾನೆ.
ಆ ಪ್ರಯತ್ನ ವಿಫಲವಾದಾಗ ಸ್ಕ್ರೂಡ್ರೈವರ್‌ನಿಂದ ಲಾಕರ್ ಒಡೆದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾನೆ. ಕೃತ್ಯದ ನಂತರ ರಕ್ತಸಿಕ್ತ ಬಟ್ಟೆಯನ್ನು ಬದಲಾಯಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಬೆಳಿಗ್ಗೆ 6:30ರ ಸುಮಾರಿಗೆ ಆತ ಮನೆಗೆ ಪ್ರವೇಶಿಸಿ, 7:20ರ ಸುಮಾರಿಗೆ (ಪೋಷಕರು ಹಿಂದಿರುಗುವ ಸ್ವಲ್ಪ ಮುಂಚೆ) ಹೊರಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಹತ್ಯೆಗೂ ಮುನ್ನ ಮತ್ತೊಂದು ಅತ್ಯಾಚಾರ
ಈ ಹಿಂದೆ ಇದೇ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಲಸದಿಂದ ವಜಾಗೊಂಡಿದ್ದ ಮಾಜಿ ಕೆಲಸಗಾರ ರಾಹುಲ್ ಮೀನಾನನ್ನು ಕೊನೆಗೂ ದ್ವಾರಕಾದ ಹೋಟೆಲೊಂದರಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮತ್ತೊಂದು ಆಘಾತಕಾರಿ ವಿಚಾರ ಬೆಳಕಿಗೆ ಬಂದಿದ್ದು, ದೆಹಲಿಯಲ್ಲಿ ಐಆರ್‌ಎಸ್ ಅಧಿಕಾರಿಯ ಪುತ್ರಿಯನ್ನು ಹತ್ಯೆ ಮಾಡುವ ಕೇವಲ ಕೆಲವೇ ಗಂಟೆಗಳ ಮೊದಲು ಆತ ರಾಜಸ್ಥಾನದ ಅಲ್ವಾರ್‌ನಲ್ಲಿ ತನ್ನ ಸ್ನೇಹಿತನ ಪತ್ನಿಯ ಮೇಲೂ ಅತ್ಯಾಚಾರ ಎಸಗಿದ್ದ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ ; ಜೀವ ರಕ್ಷಿಸುವ ವಾಹನವೇ ‘ಮೂವಿಂಗ್ ಓಯೋ’ ಆಯ್ತಾ? : ಆಂಬ್ಯುಲೆನ್ಸ್‌ನಲ್ಲಿ ಯುವಕ-ಯುವತಿಯರ ಕಾಮಕೇಳಿ!


















