ಟೆಹ್ರಾನ್ : ಅಮೆರಿಕ-ಇಸ್ರೇಲ್ ಕದನ ವಿರಾಮವನ್ನು ವಿಸ್ತರಣೆ ಮಾಡಿರುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿದ ಕೆಲವೇ ಹೊತ್ತಲ್ಲಿ ಬುಧವಾರ ಹೊರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಎರಡು ಬೃಹತ್ ಸರಕು ಸಾಗಣೆ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಆ ಹಡಗುಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಫೆಬ್ರವರಿಯಲ್ಲಿ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಯುದ್ಧ ಆರಂಭವಾದ ಬಳಿಕ ಕಡಲಿನಲ್ಲಿ ನಡೆದ ಮೊದಲ ಅತಿದೊಡ್ಡ ಕಾರ್ಯಾಚರಣೆ ಇದಾಗಿತ್ತು. ತನ್ನ ನೌಕೆಯನ್ನು ಅಮೆರಿಕ ವಶಕ್ಕೆ ಪಡೆದಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಈ ಕ್ರಮ ಕೈಗೊಂಡಿದ್ದು, ಈ ಕಾರ್ಯಾಚರಣೆಯ ವಿವರಗಳು ಇದೀಗ ಬಹಿರಂಗಗೊಂಡಿದೆ.
ದಾಳಿ ನಡೆದಿದ್ದು ಹೇಗೆ?
ಇರಾನ್‌ನ ಸರ್ಕಾರಿ ವಾಹಿನಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಮುಸುಕುಗಳನ್ನು ಧರಿಸಿದ ಶಸ್ತ್ರಸಜ್ಜಿತ ಕಮಾಂಡೋಗಳು ಹಡಗುಗಳನ್ನು ಪ್ರವೇಶಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ವಶಪಡಿಸಿಕೊಂಡ ಹಡಗುಗಳನ್ನು ‘ಎಂಎಸ್‌ಸಿ ಫ್ರಾನ್ಸೆಸ್ಕಾ’ (MSC Francesca) ಮತ್ತು ‘ಎಪಾಮಿನೋಂಡಾಸ್’ (Epaminondas) ಎಂದು ಗುರುತಿಸಲಾಗಿದೆ.

ಈ ಹಡಗುಗಳು ಸೂಕ್ತ ಅನುಮತಿಯಿಲ್ಲದೆ ಸಂಚರಿಸುತ್ತಿದ್ದವು ಮತ್ತು ಇರಾನ್‌ನ ನೌಕಾಯಾನ ವ್ಯವಸ್ಥೆಯನ್ನು ತಿರುಚಲು ಯತ್ನಿಸುತ್ತಿದ್ದವು ಎಂದು ಐಆರ್‌ಜಿಸಿ ಗಂಭೀರ ಆರೋಪ ಮಾಡಿದೆ. ಜಲಸಂಧಿಯಲ್ಲಿನ ಭದ್ರತೆ ಮತ್ತು ಶಿಸ್ತಿಗೆ ಭಂಗ ತಂದರೆ ಅದು ನಮ್ಮ ಪಾಲಿಗೆ ‘ರೆಡ್ ಲೈನ್’ (ಕೆಂಪು ಗೆರೆ) ಇದ್ದಂತೆ ಎಂದು ಇರಾನ್‌ನ ಅರೆ-ಸರ್ಕಾರಿ ಸುದ್ದಿ ಸಂಸ್ಥೆ ‘ತಸ್ನೀಮ್’ ವರದಿ ಮಾಡಿದೆ.
ಗುಂಡಿನ ದಾಳಿಗೆ ತುತ್ತಾದ ಹಡಗುಗಳು
ಗ್ರೀಕ್ ನಿರ್ವಹಣೆಯ, ಲೈಬೀರಿಯಾ ಧ್ವಜ ಹೊತ್ತಿದ್ದ ‘ಎಪಾಮಿನೋಂಡಾಸ್’ ಹಡಗಿನ ಮೇಲೆ ಒಮಾನ್‌ನ ವಾಯುವ್ಯಕ್ಕೆ 20 ನಾಟಿಕಲ್ ಮೈಲಿ ದೂರದಲ್ಲಿ ದಾಳಿ ನಡೆದಿದೆ. ಇರಾನ್‌ನ ಗನ್‌ಬೋಟ್‌ನಿಂದ ಹಾರಿಸಲಾದ ಗುಂಡುಗಳು ಮತ್ತು ರಾಕೆಟ್ ಚಾಲಿತ ಗ್ರೆನೇಡ್‌ಗಳಿಂದ (RPG) ಹಡಗಿನ ಮುಂಭಾಗಕ್ಕೆ ಹಾನಿಯಾಗಿದೆ. ಈ ಹಡಗಿನಲ್ಲಿ ಉಕ್ರೇನ್ ಹಾಗೂ ಫಿಲಿಪೈನ್ಸ್ ಮೂಲದ 21 ಮಂದಿ ಸಿಬ್ಬಂದಿ ಇದ್ದು, ಹಡಗನ್ನು ಬಂದರ್ ಅಬ್ಬಾಸ್ ಕಡೆಗೆ ಕೊಂಡೊಯ್ಯಲಾಗಿದೆ ಎಂದು ಕಡಲ ಭದ್ರತಾ ಮೂಲಗಳು ತಿಳಿಸಿವೆ.
ಪನಾಮಾ ಧ್ವಜವಿದ್ದ ‘ಎಂಎಸ್‌ಸಿ ಫ್ರಾನ್ಸೆಸ್ಕಾ’ ಹಡಗಿನ ಮೇಲೂ ಇರಾನ್‌ನ ಪಶ್ಚಿಮಕ್ಕೆ 8 ನಾಟಿಕಲ್ ಮೈಲಿ ದೂರದಲ್ಲಿ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ಹಡಗಿಗೆ ಯಾವುದೇ ಹಾನಿಯಾಗಿಲ್ಲ. ಅದೇ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಲೈಬೀರಿಯಾದ ಮತ್ತೊಂದು ಹಡಗು ‘ಯುಫೋರಿಯಾ’ ಮೇಲೂ ಗುಂಡಿನ ದಾಳಿ ನಡೆದಿದ್ದರೂ, ಅದು ಸುರಕ್ಷಿತವಾಗಿ ಯುಎಇಯ ಫುಜೈರಾ ಕಡೆಗೆ ಪ್ರಯಾಣ ಬೆಳೆಸಿದೆ. ಗುಂಡಿನ ದಾಳಿ ನಡೆಸಿದ ಬಳಿಕ ಈ ಹಡುಗಗಳ ಒಳಕ್ಕೆ ಐಆರ್‌ಜಿಸಿ ಪಡೆಗಳ ಮುಸುಕುಧಾರಿ ಯೋಧರು ನುಗ್ಗಿ, ನೌಕೆಗಳನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಜೊತೆಗೆ ಅದರಲ್ಲಿದ್ದವರನ್ನು ಒತ್ತೆಯಲ್ಲಿರಿಸಿಕೊಂಡಿದ್ದಾರೆ.
ಸಿಬ್ಬಂದಿ ಸುರಕ್ಷಿತ, ಮುಂದುವರಿದ ಮಾತುಕತೆ
ವಶಪಡಿಸಿಕೊಳ್ಳಲಾಗಿರುವ ಎಂಎಸ್‌ಸಿ ಫ್ರಾನ್ಸೆಸ್ಕಾ ಹಡಗಿನಲ್ಲಿರುವ ನಾಲ್ವರು ಮಾಂಟೆನೆಗ್ರೊ ದೇಶದ ನಾವಿಕರು ಸೇರಿದಂತೆ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಆ ದೇಶದ ಕಡಲ ವ್ಯವಹಾರಗಳ ಸಚಿವ ಫಿಲಿಪ್ ರಾಡುಲೋವಿಕ್ ಸ್ಪಷ್ಟಪಡಿಸಿದ್ದಾರೆ. ಹಡಗು ಕಂಪನಿ ಹಾಗೂ ಇರಾನ್ ಅಧಿಕಾರಿಗಳ ನಡುವೆ ಮಾತುಕತೆ ಮುಂದುವರಿದಿದೆ ಎಂದು ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಎಪಾಮಿನೋಂಡಾಸ್ ಹಡಗಿನ ನಿರ್ವಾಹಕ ಕಂಪನಿ ಟೆಕ್ನೋಮರ್ ಶಿಪ್ಪಿಂಗ್ ಇಂಕ್ ಕೂಡ ದಾಳಿಯನ್ನು ಖಚಿತಪಡಿಸಿದ್ದು, ಸಿಬ್ಬಂದಿಯ ಸುರಕ್ಷತೆಗೆ ಮೊದಲ ಆದ್ಯತೆ ನೀಡಿರುವುದಾಗಿ ಹಾಗೂ ಬಿಡುಗಡೆಗಾಗಿ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದೆ.
ಜಲಸಂಧಿಯಲ್ಲಿ ಅಸ್ತವ್ಯಸ್ತಗೊಂಡ ಸಂಚಾರ
ಕಳೆದ ಕೆಲವು ವಾರಗಳಿಂದ ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟು ಉಲ್ಬಣಗೊಂಡಿದ್ದು, ಅಮೆರಿಕವು ಇರಾನ್ ಹಡಗುಗಳ ಸಂಚಾರವನ್ನು ನಿರ್ಬಂಧಿಸಲು ಆರಂಭಿಸಿದೆ. ಇದರ ಬೆನ್ನಲ್ಲೇ ಇರಾನ್ ಕೂಡ ತನ್ನ ಕಡಲ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ. ಇದರ ಪರಿಣಾಮವಾಗಿ ಪ್ರತಿದಿನ ಸುಮಾರು 130 ಹಡಗುಗಳು ಸಂಚರಿಸುತ್ತಿದ್ದ ಹೊರ್ಮುಜ್ ಜಲಸಂಧಿಯಲ್ಲಿ ಇದೀಗ ಬೆರಳೆಣಿಕೆಯಷ್ಟು ಹಡಗುಗಳು ಮಾತ್ರ ಓಡಾಡುತ್ತಿವೆ. 2024ರಲ್ಲಿ ಎಂಎಸ್‌ಸಿ ಏರೀಸ್ (MSC Aries) ಕಂಟೈನರ್ ಹಡಗನ್ನು ವಶಪಡಿಸಿಕೊಂಡ ಬಳಿಕ ಇರಾನ್ ನಡೆಸಿದ ಮೊದಲ ಹೈಜಾಕ್ ಕಾರ್ಯಾಚರಣೆ ಇದಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ : SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 7 ಮಂದಿ ಪ್ರಥಮ.. 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳು ಇವರೇ ನೋಡಿ!


















