ರಾಯಚೂರು : ಜಿಲ್ಲೆಯ ಮಾನ್ವಿ ತಾಲೂಕಿನ ಆರೋಲಿ ಗ್ರಾಮದ ಐತಿಹಾಸಿಕ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಅರ್ಚಕರ ನಡುವಿನ ಕಿತ್ತಾಟ ಹಿನ್ನೆಲೆ ಬೀಗ ಜಡಿದು ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಪ್ರಧಾನ ಅರ್ಚಕತ್ವ ವಿಚಾರವಾಗಿ ಉದಯಕುಮಾರ ಮಲ್ಲಯ್ಯ ಬೋವಿ ಪರವಾಗಿ ಹೈಕೋರ್ಟ್ ಆದೇಶವಿದೆ ಎಂದು ಕೆಲ ಗ್ರಾಮಸ್ಥರು ವಾದಿಸುತ್ತಿದ್ದಾರೆ. ಅವರ ಕುಟುಂಬವೇ ಪರಂಪರೆಯಿಂದ ಪೂಜಾರಿ ಕಾರ್ಯ ಮಾಡುತ್ತಾ ಬಂದಿದೆ ಎಂಬ ಮಾತೂ ಕೇಳಿಬಂದಿದೆ.
ಇನ್ನೊಂದೆಡೆ, ಕಳೆದ ಮೂರು ವರ್ಷಗಳಿಂದ ರಾಜು ಎಂಬುವವರು ನಾನು ಅರ್ಚಕ ಎಂದು ಹಕ್ಕು ಸಾಧಿಸುತ್ತಿದ್ದು, ಇದೀಗ ಕೋರ್ಟ್‌ನಿಂದ ಮಧ್ಯಂತರ ಆದೇಶ ಪಡೆದುಕೊಂಡಿದ್ದಾರೆ. ಈ ವಿವಾದದಿಂದ ಇಬ್ಬರ ನಡುವೆ ತೀವ್ರ ವಾಗ್ವಾದ ಉಂಟಾಗಿ, ಗ್ರಾಮಸ್ಥರಲ್ಲಿಯೂ ಉದ್ವಿಗ್ನತೆ ಹೆಚ್ಚಾಗಿದೆ.
ಸ್ಥಿತಿ ನಿಯಂತ್ರಣಕ್ಕಾಗಿ ತಹಶೀಲ್ದಾರ್ ದೇವಸ್ಥಾನಕ್ಕೆ ಬೀಗ ಹಾಕಿ, ಒಳಗಿದ್ದ ಅರ್ಚಕರನ್ನು ಹೊರಗೆ ಕಳುಹಿಸಿದ್ದಾರೆ. ಪೊಲೀಸ್ ಬಂದೋಬಸ್ತ್ ನಡುವೆ ದೇವಸ್ಥಾನವನ್ನು ಮುಚ್ಚಲಾಗಿದೆ.
ಇನ್ನು ನಡೆಯಬೇಕಿದ್ದ ಪ್ರಥಮ ಸೇವೆ ರದ್ದಾಗಿದ್ದು, ದೀರ್ಘಕಾಲದಿಂದ ನಡೆದುಕೊಂಡು ಬಂದಿದ್ದ ಧಾರ್ಮಿಕ ಆಚರಣೆಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಚರಂಡಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ!


















