ಭೋಪಾಲ್ : ದೇಶದಲ್ಲಿ ಕಳೆದ ವರ್ಷ 3 ಮತ್ತು ಈ ವರ್ಷ 1 ಭೀಕರ ‘ಬ್ಲೂ ಡ್ರಮ್’ (ನೀಲಿ ಡ್ರಮ್) ಹತ್ಯೆ ಪ್ರಕರಣಗಳು ಭಾರೀ ಸದ್ದು ಮಾಡಿದ್ದವು. ಅದಕ್ಕೆ ಈಗ ಮತ್ತೊಂದು ಸೇರ್ಪಡೆಯೆಂಬಂತೆ, ಮಧ್ಯಪ್ರದೇಶದ ಸತ್ನಾದಲ್ಲಿ 11 ವರ್ಷದ ಬಾಲಕನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿ, ಮೃತದೇಹವನ್ನು ಮನೆಯಲ್ಲಿದ್ದ ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಬಚ್ಚಿಟ್ಟಿರುವ ಅಮಾನುಷ ಘಟನೆ ನಡೆದಿದೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಸೋಮವಾರ ತಾಯಿ ಆಶಾ ಹಾಗೂ ಆಕೆಯ ಪುತ್ರಿ ಮನೆಗೆ ಮರಳಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮನೆಯ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಆದರೆ ಒಳಗಡೆ ಕೂಲರ್ ಮತ್ತು ದೀಪಗಳು ಉರಿಯುತ್ತಿದ್ದವು.
5ನೇ ತರಗತಿ ಪರೀಕ್ಷೆ ಮುಗಿಸಿದ್ದ ತನ್ನ ಮಗ ಬಾಗಿಲು ತೆಗೆಯಬಹುದು ಎಂದು ಕಾದ ಆಶಾಳಿಗೆ ನಿರಾಸೆಯಾಗಿತ್ತು. ಆತಂಕಗೊಂಡ ತಾಯಿ, ತನ್ನ ಕೋಪಿಷ್ಟ ಪತಿ ಮಗನನ್ನು ಎಲ್ಲಾದರೂ ಕರೆದುಕೊಂಡು ಹೋಗಿರಬಹುದು ಎಂದು ಭಾವಿಸಿದ್ದರು. ಆದರೆ, ಮಗನ ಸುಳಿವು ಸಿಗದಿದ್ದಾಗ ಗಾಬರಿಗೊಂಡು ಪೊಲೀಸರ ಮೊರೆ ಹೋದರು.
ರಕ್ತಸಿಕ್ತ ಕೊಠಡಿ, ಡ್ರಮ್‌ನಲ್ಲಿ ಶವ!
ಪೊಲೀಸರು ಸ್ಥಳಕ್ಕೆ ಆಗಮಿಸಿ ಬೀಗ ಒಡೆದು ಒಳಗೆ ಹೋದಾಗ ಕಂಡ ದೃಶ್ಯ ಅತ್ಯಂತ ಭಯಾನಕವಾಗಿತ್ತು. ಮನೆಯ ಗೋಡೆ ಮತ್ತು ದಿಂಬಿನ ಮೇಲೆ ರಕ್ತದ ಕಲೆಗಳಿದ್ದವು. ಕೋಣೆಯ ಮೂಲೆಯಲ್ಲಿದ್ದ ನೀಲಿ ಬಣ್ಣದ ಡ್ರಮ್‌ನಿಂದ ರಕ್ತ ಜಿನುಗುತ್ತಿತ್ತು. ಪೊಲೀಸರು ಡ್ರಮ್ ತೆರೆದು ನೋಡಿದಾಗ, ಬಟ್ಟೆಗಳಿಂದ ಮುಚ್ಚಲ್ಪಟ್ಟ ಸ್ಥಿತಿಯಲ್ಲಿದ್ದ ಬಾಲಕನ ಶವ ಪತ್ತೆಯಾಗಿದೆ. ಬಾಲಕನ ಕತ್ತು ಸೀಳಿ, ಆತನ ದೇಹವನ್ನು ಡ್ರಮ್‌ನೊಳಗೆ ತುರುಕಲಾಗಿತ್ತು. ಮಗನ ಮೃತದೇಹ ಕಂಡು ತಾಯಿ ಆಶಾ ರೋದನ ಮುಗಿಲುಮುಟ್ಟಿತ್ತು.
ಮದುವೆಗೆ ನಿರಾಕರಿಸಿದ್ದೇ ಕೊಲೆಗೆ ಕಾರಣ?
ಈ ಘೋರ ಕೃತ್ಯದ ಹಿಂದೆ ಲಾಂಡ್ರಿ ಅಂಗಡಿ ಮಾಲೀಕ ಮಥುರಾ ರಜಕ್ ಎಂಬಾತನ ಕೈವಾಡವಿದೆ ಎಂದು ಆಶಾ ಅವರ ಕುಟುಂಬ ಗಂಭೀರ ಆರೋಪ ಮಾಡಿದೆ. ಆತ ಆಶಾಳನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದ. ಆದರೆ, ಆತನ ಪ್ರಸ್ತಾಪವನ್ನು ಆಶಾ ನಿರಂತರವಾಗಿ ತಿರಸ್ಕರಿಸಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ಆತ ಮನೆಗೆ ನುಗ್ಗಿ, ಬಾಲಕನನ್ನು ಕುಡುಗೋಲಿನಿಂದ ಕತ್ತು ಸೀಳಿ ಕೊಂದಿದ್ದಾನೆ ಎಂದು ಆಶಾಳ ಪುತ್ರಿ ಆರೋಪಿಸಿದ್ದಾಳೆ. ಘಟನೆಯ ನಂತರ ಮಥುರಾ ರಜಕ್ ತಲೆಮರೆಸಿಕೊಂಡಿದ್ದು, ಆತನ ಅಂಗಡಿಯೂ ಬಂದ್ ಆಗಿರುವುದು ಅನುಮಾನವನ್ನು ಮತ್ತಷ್ಟು ಬಲಪಡಿಸಿದೆ.
ಮೂರು ತಂಡಗಳಿಂದ ತನಿಖೆ ಚುರುಕು
ದೂರು ಬಂದ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರೊಂದಿಗೆ ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. “ಬಾಲಕನ ಹತ್ಯೆಗೆ ಹರಿತವಾದ ಆಯುಧ ಬಳಸಲಾಗಿದೆ. ಘಟನೆಯ ಕುರಿತು ಪ್ರಾಥಮಿಕ ಹಂತದ ತನಿಖೆ ನಡೆಯುತ್ತಿದ್ದು, ಸಾಕ್ಷ್ಯಾಧಾರಗಳು ಮತ್ತು ಹೇಳಿಕೆಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ” ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ASP) ಶಿವೇನ್ಶ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಪ್ರೇಯಸಿ ಮನೆಗೆ ನುಗ್ಗಿ ಪೆಟ್ರೋಲ್ ಸುರಿದುಕೊಂಡು ಪ್ರಿಯಕರ ಆತ್ಮಹತ್ಯೆ!


















