ಮೋರ್ಸ್ : ಜರ್ಮನಿಯ ಮೋರ್ಸ್ ನಗರದ ಡ್ಯೂಸ್‌ಬರ್ಗ್ ಪ್ರದೇಶದಲ್ಲಿರುವ ಗುರುದ್ವಾರವೊಂದರಲ್ಲಿ ಎರಡು ಗುಂಪುಗಳ ನಡುವೆ ಭೀಕರ ಘರ್ಷಣೆ ನಡೆದಿದ್ದು, ಕನಿಷ್ಠ 11 ಮಂದಿ ಗಾಯಗೊಂಡಿದ್ದಾರೆ. ಧಾರ್ಮಿಕ ಕೇಂದ್ರದೊಳಗೆ ನಡೆದ ಈ ಹಿಂಸಾಚಾರದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಚಾಕು ಹಾಗೂ ಕೃಪಾಣ್‌ನಂತಹ (ಸಿಖ್ಖರು ಧರಿಸುವ ಸಾಂಪ್ರದಾಯಿಕ ಕತ್ತಿ) ಹರಿತವಾದ ಆಯುಧಗಳನ್ನು ಬಳಸಿ ಪರಸ್ಪರ ಕಾದಾಡುತ್ತಿರುವ ಭಯಾನಕ ದೃಶ್ಯಗಳು ಕಂಡುಬಂದಿವೆ.
ಈ ಘರ್ಷಣೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ತಕ್ಷಣವೇ ವಿಶೇಷ ಪೊಲೀಸ್ ತುಕಡಿಗಳನ್ನು ಸ್ಥಳಕ್ಕೆ ಕರೆಸಲಾಗಿದೆ. ಧಾರ್ಮಿಕ ಕೇಂದ್ರದೊಳಗೆ ಹರಿತವಾದ ಆಯುಧಗಳ ಜೊತೆಗೆ ಪೆಪ್ಪರ್ ಸ್ಪ್ರೇ ಹಾಗೂ ಬಂದೂಕನ್ನೂ ಬಳಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ತುರ್ತು ವೈದ್ಯಕೀಯ ಸಿಬ್ಬಂದಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಪೊಲೀಸರು ಓರ್ವ ಶಂಕಿತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಅಪರಾಧ ತನಿಖಾ ವಿಭಾಗವು ಈಗ ಯಾರು ಯಾರ ಮೇಲೆ ಮೊದಲು ದಾಳಿ ಮಾಡಿದರು ಎಂಬುದನ್ನು ಪತ್ತೆಹಚ್ಚುವ ಕಾರ್ಯದಲ್ಲಿ ನಿರತವಾಗಿದೆ.
ಕಲಹಕ್ಕೆ ಕಾರಣವೇನು?
ಈ ರಕ್ತಸಿಕ್ತ ಘರ್ಷಣೆಗೆ ನಿಖರವಾದ ಕಾರಣವೇನೆಂದು ವಿಸ್ತೃತ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ಆದರೆ, ಪ್ರಾಥಮಿಕ ವರದಿಗಳ ಪ್ರಕಾರ, ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ವಿಚಾರವಾಗಿ ಈ ವಿವಾದ ಭುಗಿಲೆದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಜೊತೆಗೆ, ಗುರುದ್ವಾರದ ನಿಧಿಯ ನಿರ್ವಹಣೆಗೆ ಸಂಬಂಧಿಸಿದಂತೆಯೂ ಹಿಂದಿನ ಮತ್ತು ಇಂದಿನ ಆಡಳಿತ ಮಂಡಳಿ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ವಿವಿಧ ಗುಂಪುಗಳು ಹಣದ ಮೇಲಿನ ಹಕ್ಕಿಗಾಗಿ ಕಾದಾಡುತ್ತಿದ್ದವು ಎಂಬುದು ಬಹಿರಂಗವಾಗಿದೆ.
ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಸೋಮವಾರ ನಡೆದ ಈ ಭೀಕರ ಕಾಳಗವನ್ನು ಕಣ್ಣಾರೆ ಕಂಡ 56 ವರ್ಷದ ವ್ಯಕ್ತಿಯೊಬ್ಬರು ಮಾಧ್ಯಮಗಳ ಮುಂದೆ ತಾವು ಕಂಡ ದೃಶ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. “ಇದು ಪೂರ್ವನಿಯೋಜಿತ ಕೃತ್ಯ ಎಂಬುದು ಸ್ಪಷ್ಟ. ಪ್ರಾರ್ಥನೆ ಆರಂಭವಾಗುವ ಸ್ವಲ್ಪ ಸಮಯದ ಮೊದಲು, ದಾಳಿಕೋರರು ಏಕಾಏಕಿ ತಮ್ಮ ವಿರೋಧಿಗಳ ಮುಖಕ್ಕೆ ಪೆಪ್ಪರ್ ಸ್ಪ್ರೇ ಎರಚಿದರು. ನಂತರ ಅವರಲ್ಲೊಬ್ಬ ಪಿಸ್ತೂಲ್‌ನಿಂದ ಗುಂಡು ಹಾರಿಸಿದ. ಕತ್ತಿಗಳನ್ನು ಬೀಸಿದ್ದನ್ನೂ ನಾನು ನೋಡಿದ್ದೇನೆ” ಎಂದು ಅವರು ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟಿದ್ದಾರೆ.
ಗುರುದ್ವಾರದ ಮೇಲೆ ಯಾರ ಹಿಡಿತವಿರಬೇಕು ಎಂಬ ಕಾರಣಕ್ಕಾಗಿ ಈ ಘರ್ಷಣೆ ನಡೆದಿದ್ದು, ದಾಳಿ ಶುರುವಾಗುತ್ತಿದ್ದಂತೆ ಹಲವರು ಭಯದಿಂದ ಓಡಿಹೋಗಿದ್ದಾರೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ. ಸದ್ಯ ಗುಂಡು ಹಾರಿಸಿದ ಬಂದೂಕು ಪತ್ತೆಯಾಗಿಲ್ಲವಾದರೂ, ಸ್ಥಳದಲ್ಲಿ ದೊರೆತಿರುವ ಗುಂಡಿನ ಖಾಲಿ ಕವಚಗಳನ್ನು ಆಧರಿಸಿ, ಅದು ‘ಬ್ಲಾಂಕ್-ಫೈರಿಂಗ್ ಪಿಸ್ತೂಲ್’ (ನೈಜ ಗುಂಡುಗಳಿಲ್ಲದೆ ಕೇವಲ ಶಬ್ದ ಮಾಡುವ ಪಿಸ್ತೂಲ್) ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ ; ಜನಗಣತಿ ಕಾರ್ಯ ನಿಧಾನ – ಗೈರಾಗಿರುವ ಸಿಬ್ಬಂದಿಗಳ ಮೇಲೆ FIR ಕ್ರಮದ ಎಚ್ಚರಿಕೆ!



















