ವಾಷಿಂಗ್ಟನ್/ಟೆಹ್ರಾನ್: ಇರಾನ್- ಅಮೆರಿಕ ತಾತ್ಕಾಲಿಕ ಕದನ ವಿರಾಮದ ನಡುವೆಯೂ ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೊಸ ತಿರುವು ಪಡೆದುಕೊಂಡಿದೆ. ಇರಾನ್‌ನೊಂದಿಗೆ ಮಾತುಕತೆ ವಿಫಲವಾದರೆ, ಮಧ್ಯಪ್ರಾಚ್ಯದ ದೇಶಗಳಿಗೆ ರಕ್ಷಣೆ ನೀಡುತ್ತಿರುವ ‘ಗಾರ್ಡಿಯನ್ ಏಂಜೆಲ್’ (ರಕ್ಷಕ ದೇವದೂತ) ರೂಪದಲ್ಲಿ ಅಮೆರಿಕ ಸಲ್ಲಿಸಿದ ಸೇವೆಗೆ ಪ್ರತಿಯಾಗಿ ಹೊರ್ಮುಜ್ ಜಲಸಂಧಿಯಲ್ಲಿ ಸಾಗುವ ಹಡಗುಗಳ ಮೇಲೆ ಟೋಲ್ (ಸುಂಕ) ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳ ನಡುವೆ 60 ದಿನಗಳ ಕದನ ವಿರಾಮ ಒಪ್ಪಂದ ಏರ್ಪಟ್ಟ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
‘ಟ್ರುತ್ ಸೋಷಿಯಲ್’ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅಧ್ಯಕ್ಷ ಟ್ರಂಪ್, “60 ದಿನಗಳ ಕದನ ವಿರಾಮದ ಅವಧಿಯಲ್ಲಿ ಹೊರ್ಮುಜ್ ಜಲಸಂಧಿಯಲ್ಲಿ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಒಪ್ಪಂದವು ಯಶಸ್ವಿಯಾಗಿ ಪೂರ್ಣಗೊಂಡರೆ ಮುಂದೆಯೂ ಸುಂಕ ಇರುವುದಿಲ್ಲ. ಆದರೆ, ಒಂದು ವೇಳೆ ಮಾತುಕತೆ ವಿಫಲವಾದರೆ, ಮಧ್ಯಪ್ರಾಚ್ಯ ರಾಷ್ಟ್ರಗಳ ರಕ್ಷಕನಾಗಿ ಅಮೆರಿಕ ಮಾಡಿದ ಭೂತ, ವರ್ತಮಾನ ಮತ್ತು ಭವಿಷ್ಯದ ವೆಚ್ಚಗಳ ಮರುಪಾವತಿಗಾಗಿ ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕವೇ ಟೋಲ್ ವಿಧಿಸಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಜಲಸಂಧಿಯನ್ನು ಮುಚ್ಚಿರುವುದಾಗಿ ಇರಾನ್ ಮಾಡಿರುವ ಪ್ರತ್ಯೇಕ ಪ್ರತಿಪಾದನೆಗೆ ಟ್ರಂಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜಲಸಂಧಿ ಮುಚ್ಚಿದ್ದಾಗಿ ಇರಾನ್ ಘೋಷಣೆ, ಹೆಚ್ಚಿದ ಆತಂಕ
ಇನ್ನೊಂದೆಡೆ, ಲೆಬನಾನ್‌ನಲ್ಲಿ ಇಸ್ರೇಲ್ ಕದನ ವಿರಾಮ ಉಲ್ಲಂಘಿಸುತ್ತಿದೆ ಮತ್ತು ಅಮೆರಿಕ ಇದನ್ನು ತಡೆಯಲು ವಿಫಲವಾಗಿದೆ ಎಂದು ಆರೋಪಿಸಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಶನಿವಾರ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿರುವುದಾಗಿ ಘೋಷಿಸಿದೆ. ಕಚ್ಚಾ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಈ ಜಲಸಂಧಿ ಬಂದ್ ಘೋಷಣೆಯಿಂದ ಜಾಗತಿಕ ಇಂಧನ ಪೂರೈಕೆಯ ಮೇಲೆ ಮತ್ತೆ ಆತಂಕದ ಕಾರ್ಮೋಡ ಮೂಡಿದೆ. ಆದಾಗ್ಯೂ, ಶನಿವಾರ ಒಂದೇ ದಿನ 55 ವಾಣಿಜ್ಯ ಹಡಗುಗಳು ಸುರಕ್ಷಿತವಾಗಿ ಸಂಚರಿಸಿದ್ದು, ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಧಕ್ಕೆ ಬಾರದಂತೆ ಅಮೆರಿಕದ ಸೆಂಟ್ರಲ್ ಕಮಾಂಡ್ ಭದ್ರತೆ ಒದಗಿಸುತ್ತಿದೆ ಎನ್ನಲಾಗಿದೆ.
ಲೆಬನಾನ್‌ನಲ್ಲಿ ಮುಂದುವರಿದ ಹಿಂಸಾಚಾರ
ಅಮೆರಿಕ ಮತ್ತು ಇರಾನ್ ನಡುವೆ ಪರಮಾಣು ಕಾರ್ಯಕ್ರಮ ಕುರಿತು ಸ್ವಿಟ್ಜರ್ಲೆಂಡ್‌ನಲ್ಲಿ ಮಾತುಕತೆ ಆರಂಭವಾಗಲು ಲೆಬನಾನ್‌ನಲ್ಲಿನ ಸಂಘರ್ಷ ನಿಲ್ಲುವುದು ಮುಖ್ಯ ಷರತ್ತಾಗಿತ್ತು. ಆದರೆ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್‌ನಾದ್ಯಂತ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹೆಜ್ಬುಲ್ಲಾ ಉಗ್ರರ ದಾಳಿಗೆ ಪ್ರತಿಯಾಗಿ ತಾನು ದಾಳಿ ನಡೆಸಿರುವುದಾಗಿ ಇಸ್ರೇಲ್ ಸಮರ್ಥಿಸಿಕೊಂಡಿದ್ದು, ಪ್ರಾದೇಶಿಕ ಶಾಂತಿ ಒಪ್ಪಂದದ ಸ್ಥಿರತೆಯನ್ನು ಇದು ಪ್ರಶ್ನಿಸುವಂತೆ ಮಾಡಿದೆ. ಮಾರ್ಚ್ 2 ರಿಂದ ನಡೆದ ಇಸ್ರೇಲ್ ದಾಳಿಗಳಲ್ಲಿ ಈವರೆಗೆ 4,000ಕ್ಕೂ ಹೆಚ್ಚು ಮಂದಿ ಲೆಬನಾನ್‌ನಲ್ಲಿ ಮೃತಪಟ್ಟಿದ್ದಾರೆ.
ಸ್ವಿಟ್ಜರ್ಲೆಂಡ್‌ನಲ್ಲಿ ಹೈ-ವೋಲ್ಟೇಜ್ ಮಾತುಕತೆ
ಈ ಎಲ್ಲಾ ಗೊಂದಲಗಳ ನಡುವೆಯೂ ಉಭಯ ದೇಶಗಳ ನಡುವಿನ ಶಾಂತಿ ಮಾತುಕತೆಗಾಗಿ ಸ್ವಿಟ್ಜರ್ಲೆಂಡ್‌ನಲ್ಲಿ ವೇದಿಕೆ ಸಿದ್ಧವಾಗಿದೆ. ಇರಾನ್‌ನ ಮುಖ್ಯ ಸಮಾಲೋಚಕ ಮೊಹಮ್ಮದ್ ಬಾಕರ್ ಖಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವು ಸ್ವಿಟ್ಜರ್ಲೆಂಡ್‌ಗೆ ತಲುಪಿದೆ. ಇತ್ತ ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ತಂಡ ಮಾತುಕತೆಗೆ ಮುಂದಡಿಯಿಟ್ಟಿದೆ. “ಲೆಬನಾನ್ ಮತ್ತು ಇಸ್ರೇಲ್ ಎರಡರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ, ಮಾತುಕತೆಯು ಸಕಾರಾತ್ಮಕ ಹಾದಿಯಲ್ಲಿದೆ” ಎಂದು ಜೆಡಿ ವ್ಯಾನ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ಅಂಶಗಳ ಕುರಿತು ಚರ್ಚಿಸಲು ಅಮೆರಿಕದ ಸಂಧಾನಕಾರರಾದ ಜ್ಯಾರೆಡ್ ಕುಶ್ನರ್ ಮತ್ತು ಸ್ಟೀವ್ ವಿಟ್ಕಾಫ್ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ.



















