ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿದ್ದ ಸಂವಿಧಾನದ (131ನೇ ತಿದ್ದುಪಡಿ) ಮಸೂದೆ, 2026 ಲೋಕಸಭೆಯಲ್ಲಿ ಅಂಗೀಕಾರ ಪಡೆಯುವಲ್ಲಿ ವಿಫಲವಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಸರ್ಕಾರವು ಸಂಸತ್ತಿನಲ್ಲಿ ತನ್ನದೇ ಮಸೂದೆಯನ್ನು ಪಾಸ್ ಮಾಡಿಕೊಳ್ಳುವಲ್ಲಿ ಹಿನ್ನಡೆ ಅನುಭವಿಸಿದೆ.
ಶುಕ್ರವಾರ ಸಂಜೆ ನಡೆದ ಮತದಾನದಲ್ಲಿ, ಸಾಂವಿಧಾನಿಕ ತಿದ್ದುಪಡಿಗೆ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವಲ್ಲಿ ಈ ಮಸೂದೆ ವಿಫಲವಾಗಿದ್ದು, ವಿಧೇಯಕವನ್ನು ಸೋಲಿಸುವಲ್ಲಿ ಇಂಡಿಯಾ ಒಕ್ಕೂಟ ಯಶಸ್ಸು ಕಂಡಿದೆ. ಲೋಕಸಭೆಯಲ್ಲಿ 2011ರ ನಂತರ ಸಾಂವಿಧಾನಿಕ ತಿದ್ದುಪಡಿ ಮಸೂದೆಯೊಂದು ವಿಫಲವಾಗಿರುವುದು ಇದೇ ಮೊದಲು.
ಮಸೂದೆಯ ಪರವಾಗಿ 298 ಮತ್ತು ವಿರುದ್ಧವಾಗಿ 230 ಮತಗಳು ಚಲಾವಣೆಯಾದವು. ಮತದಾನದಲ್ಲಿ ಪಾಲ್ಗೊಂಡಿದ್ದ ಒಟ್ಟು 528 ಸದಸ್ಯರ ಪೈಕಿ ಮಸೂದೆ ಅಂಗೀಕಾರಕ್ಕೆ 352 (ಮೂರನೇ ಎರಡರಷ್ಟು) ಮತಗಳ ಅಗತ್ಯವಿತ್ತು. ಆದರೆ, ಕೇವಲ 54 ಮತಗಳ ಕೊರತೆಯಿಂದಾಗಿ ಮಸೂದೆ ಬಿದ್ದುಹೋಯಿತು.
ಹಿಂಪಡೆಯಲಾದ ಇತರ ಮಸೂದೆಗಳು
ತಿದ್ದುಪಡಿ ಮಸೂದೆ ಸೋಲು ಕಂಡ ಬೆನ್ನಲ್ಲೇ, ಅದರೊಂದಿಗೆ ಮಂಡಿಸಲಾಗಿದ್ದ ಇತರ ಎರಡು ಮಸೂದೆಗಳನ್ನು ಸರ್ಕಾರ ಹಿಂಪಡೆದಿದೆ. 2011ರ ಜನಗಣತಿಯ ಆಧಾರದ ಮೇಲೆ ಹೊಸದಾಗಿ ಕ್ಷೇತ್ರಗಳ ಗಡಿ ಮರುಹಂಚಿಕೆ ಮಾಡುವ ‘ಕ್ಷೇತ್ರ ಮರುವಿಂಗಡಣೆ ಮಸೂದೆ 2026’ ಮತ್ತು ದೆಹಲಿ, ಪುದುಚೇರಿ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭೆಗಳಿಗೆ ಸಂಬಂಧಿಸಿದ ‘ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ 2026’ ಅನ್ನು ವಾಪಸ್ ಪಡೆಯಲಾಯಿತು. ಈ ಮೂರು ಮಸೂದೆಗಳು ಪರಸ್ಪರ ಅಂತರ್ಗತವಾಗಿ ಸಂಪರ್ಕ ಹೊಂದಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದು, ಉಳಿದೆರಡು ಮಸೂದೆಗಳನ್ನು ಕೈಬಿಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ಮಸೂದೆಯಲ್ಲೇನಿತ್ತು? ಕ್ಷೇತ್ರ ವಿಂಗಡಣೆ ವಿವಾದವೇಕೆ?
131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಲೋಕಸಭೆಯ ಗರಿಷ್ಠ ಸಂಖ್ಯಾಬಲವನ್ನು 550 ರಿಂದ 850 ಕ್ಕೆ ಹೆಚ್ಚಿಸುವ ಗುರಿ ಹೊಂದಿತ್ತು. ಜತೆಗೆ, 2023ರ ‘ನಾರಿ ಶಕ್ತಿ ವಂದನ್ ಅಧಿನಿಯಮ್’ (ಮಹಿಳಾ ಮೀಸಲಾತಿ ಕಾಯ್ದೆ) ಜಾರಿಯನ್ನು ಮುಂದಿನ ಜನಗಣತಿಯಿಂದ ಪ್ರತ್ಯೇಕಿಸಿ, 2011ರ ಹಳೆಯ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ನಡೆಸಿ 2029ರ ವೇಳೆಗೆ ಮೀಸಲಾತಿ ಜಾರಿಗೊಳಿಸುವ ಪ್ರಸ್ತಾಪ ಇದರಲ್ಲಿತ್ತು. ಮೂಲ ಕಾಯ್ದೆಯ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ಜನಗಣತಿ ಪೂರ್ಣಗೊಂಡು, ಬಳಿಕ ಕ್ಷೇತ್ರ ವಿಂಗಡಣೆಯಾದ ನಂತರವಷ್ಟೇ (ಅಂದಾಜು 2034ರ ಹೊತ್ತಿಗೆ) ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ಬರಬೇಕಿತ್ತು. ಆದರೆ ಹಳೆಯ ದತ್ತಾಂಶಗಳ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಮಾಡುವ ಸರ್ಕಾರದ ನಿರ್ಧಾರವು ಪ್ರಾದೇಶಿಕ ಅಸಮಾನತೆ ಹಾಗೂ ಜಾತಿ ಲೆಕ್ಕಾಚಾರದ ವಿವಾದಗಳಿಗೆ ನಾಂದಿ ಹಾಡಿತ್ತು.
ಸರ್ಕಾರದ ಭರವಸೆಗೆ ಒಪ್ಪದ ವಿರೋಧ ಪಕ್ಷಗಳು
ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಭರವಸೆ ನೀಡಿದ್ದರು. ಶುಕ್ರವಾರ ಅಂತಿಮ ಕ್ಷಣದಲ್ಲಿ ಅಮಿತ್ ಶಾ ಅವರು, ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಶೇ. 50ರಷ್ಟು ಸೀಟುಗಳ ಹೆಚ್ಚಳವನ್ನು ಖಾತರಿಪಡಿಸುವ ಪರಿಷ್ಕೃತ ಪ್ರತಿಯೊಂದಿಗೆ ಮಸೂದೆ ತಂದರೆ ಬೆಂಬಲಿಸುತ್ತೀರಾ ಎಂದು ವಿಪಕ್ಷಗಳಿಗೆ ಪ್ರಸ್ತಾಪ ಇಟ್ಟಿದ್ದರು. ಆದರೆ ವಿಪಕ್ಷಗಳು ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಹೇಳಿ ಇದನ್ನು ತಿರಸ್ಕರಿಸಿದವು.
ಮಹಿಳಾ ಮೀಸಲಾತಿಗೆ ತಮ್ಮ ಸಂಪೂರ್ಣ ಬೆಂಬಲವಿದೆಯಾದರೂ, ತರಾತುರಿಯಲ್ಲಿ ಕ್ಷೇತ್ರ ವಿಂಗಡಣೆ ಮಾಡುವುದಕ್ಕೆ ವಿರೋಧವಿದೆ ಎಂದು ವಿಪಕ್ಷಗಳು ಪಟ್ಟು ಹಿಡಿದವು. ಇದೊಂದು ಮಹಿಳಾ ಮೀಸಲಾತಿ ಮಸೂದೆಯಲ್ಲ, ಬದಲಿಗೆ ಭಾರತದ ಚುನಾವಣಾ ನಕ್ಷೆಯನ್ನು ಬದಲಾಯಿಸುವ ಹುನ್ನಾರ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಹಿಂದುಳಿದ ವರ್ಗಗಳನ್ನು (OBC) ಒಳಗೊಂಡಿರದ ಹಳೆಯ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಮಾಡಲು ನಾವು ಎಂದಿಗೂ ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದಿಸಿದ್ದಾರೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ಮೋದಿ ತಾವು ಮಹಿಳಾ ಪರ ಎಂದು ಬಿಂಬಿಸಿಕೊಳ್ಳಲು ಈ ಪ್ರಯತ್ನ ಮಾಡಿದ್ದಾರೆ ಎಂಬುದು ವಿಪಕ್ಷಗಳ ಆರೋಪವಾಗಿದೆ.
ಸರ್ಕಾರದ ಮುಂದಿನ ಆಯ್ಕೆಗಳೇನು?
ತಿದ್ದುಪಡಿ ಮಸೂದೆ ವಿಫಲವಾದರೂ, ಗುರುವಾರವಷ್ಟೇ ಗೆಜೆಟ್‌ನಲ್ಲಿ ಪ್ರಕಟಗೊಂಡಿರುವ ಮೂಲ 2023ರ ಮಹಿಳಾ ಮೀಸಲಾತಿ ಕಾಯ್ದೆ ಅಸ್ತಿತ್ವದಲ್ಲಿರುತ್ತದೆ. ಆದರೆ ಹೊಸದಾಗಿ ಕ್ಷೇತ್ರ ವಿಂಗಡಣೆ ಮಾಡದೆ ಅದನ್ನು ಜಾರಿಗೆ ತರಲು ಸಾಧ್ಯವಿಲ್ಲ. ಒಂದು ವೇಳೆ ಸರ್ಕಾರ ಮೀಸಲಾತಿಯನ್ನು ಶೀಘ್ರವೇ ಜಾರಿಗೊಳಿಸಲು ಬಯಸಿದರೆ, ಪ್ರಸ್ತುತ ಇರುವ 543 ಸೀಟುಗಳಲ್ಲೇ ಶೇ.33ರಷ್ಟು ಸ್ಥಾನಗಳನ್ನು ಮೀಸಲಿಡುವಂತಹ ಹೊಸ ಪರ್ಯಾಯಗಳೊಂದಿಗೆ ಮತ್ತೆ ಸಂಸತ್ತಿನ ಮೊರೆ ಹೋಗಬೇಕಾಗುತ್ತದೆ. ಮುಂದಿನ ರೂಪುರೇಷೆಗಳ ಕುರಿತು ಚರ್ಚಿಸಲು ಇಂದು ಕೇಂದ್ರ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಸಭೆಯ ನಿರ್ಧಾರಗಳು ಕುತೂಹಲ ಮೂಡಿಸಿವೆ.
ಇದನ್ನೂ ಓದಿ : ಅಂಬೇಡ್ಕರ್ ಮೂರ್ತಿ, ಬಸವಣ್ಣನ ಪೋಟೋ ಇದ್ದ ಕಟ್ಟೆ ತೆರೆವುಗೊಳಿಸಿದ್ದಕ್ಕೆ ಸಿಡಿದೆದ್ದ ಗ್ರಾಮಸ್ಥರು.. ರಸ್ತೆ ತಡೆದು ಪ್ರೊಟೆಸ್ಟ್!


















