ರಾಯಚೂರು : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಸಮೀಪ ಇಂದು (ಏ.17) ಸಂಭವಿಸಿದ ಭೀಕರ ಬಸ್-ಕಾರು ಅಪಘಾತದಲ್ಲಿ ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಕೃಷ್ಣ ನಾಯಕ್ (52) ಹಾಗೂ ಅವರ ಕುಟುಂಬದ 7 ಜನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಕೃಷ್ಣಾ ನಾಯಕ್ ಅಣ್ಣ ವೆಂಕೋಬಾ ಮಗಳಾದ ಶಶಿಕಲಾ ಹಾಗೂ ಆಕೆಯ ಮಗ ಇದೀಗ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಮೃತಪಟ್ಟವರು :
ಕೃಷ್ಣಾ ನಾಯಕ್ (52), ಅವರ ಪತ್ನಿ ಅನಂತಕಲಾ (45), ಪುತ್ರಿ ನಿಸರ್ಗ (30), ಅಳಿಯ ಶರಣಪ್ಪ (36), ಮೊಮ್ಮಕ್ಕಳಾದ ಸಿದ್ಧಾರ್ಥ (3) ಮತ್ತು ಅದ್ವಿಕಾ (5) ಹಾಗೂ ಶ್ರೀನಿಧಿ (1.6 ವರ್ಷ) ಮೃತಪಟ್ಟಿದ್ದಾರೆ. ಇವರ ಜೊತೆಗೆ ಕೃಷ್ಣಾ ನಾಯಕ್ ಅವರ ಅಣ್ಣ ವೆಂಕೋಬಾ ಅವರ ಮಗಳು ಶಶಿಕಲಾ (30) ಮತ್ತು ಆಕೆಯ ಪುತ್ರ ಚಂದನ್ (3) ಕೂಡ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಆಗಿದ್ದೇನು?
ಸಿರವಾರ ಪಟ್ಟಣ ಪಂಚಾಯಿತಿ ಸದಸ್ಯರಾಗಿದ್ದ ಕೃಷ್ಣ ನಾಯಕ್ ತಮ್ಮ ಕುಟುಂಬ ಸಮೇತ ಸುರಪುರದಲ್ಲಿರುವ ವೇಣುಗೋಪಾಲ ಸ್ವಾಮಿಯ ದರ್ಶನಕ್ಕಾಗಿ ಕಾರಿನಲ್ಲಿ ತೆರಳಿದ್ದರು. ದರ್ಶನ ಮುಗಿಸಿ ವಾಪಸ್ ಸಿರವಾರದತ್ತ ಬರುತ್ತಿದ್ದಾಗ ಶಾಂತಪುರ ಕ್ರಾಸ್ ಬಳಿ ಕಾರು ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದಾಗ ಎದುರುಗಡೆಯಿಂದ ಬರುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬಸ್ ಮತ್ತು ಕಾರು ಎರಡೂ ಉಜ್ಜಿಕೊಂಡು ಹೋಗಿದ್ದು, ಬಸ್‌ನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಕಾರಿಗೂ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆಯಲ್ಲಿ ಕಾರಿನಲ್ಲಿದ್ದವರು ಹೊರಬರಲಾರದೇ ಸುಟ್ಟು ಕರಕಲಾಗಿದ್ದು, ಭಾರೀ ಗಾಯಗಳಿಂದ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯ ಬಳಿಕ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ರಕ್ಷಣಾ ಕಾರ್ಯ ನಡೆಸಿದರು.
ಇದನ್ನೂ ಓದಿ : ಹಾರ್ಮೊಜ್ ಜಲಸಂಧಿ ದಾಟಿ ಕಾರವಾರದ ವಾಣಿಜ್ಯ ಬಂದರು ತಲುಪಿದ ಹಡಗು!



















