ಬೆಂಗಳೂರು : ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಗ್ರಾಮದಲ್ಲಿರುವ ಅಡಿಕೆ ತೋಟವೊಂದರಲ್ಲಿ ಮಹಿಳೆಯ ತಲೆಬುರುಡೆ ಹಾಗೂ ಕೈ-ಕಾಲಿನ ಕೆಲ ಮೂಳೆಗಳು ಪತ್ತೆಯಾಗಿದೆ. ತುಮಕೂರು ನಿವಾಸಿ ಯಮುನಾ (35) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಮಾಹಿತಿಗಳ ಪ್ರಕಾರ ಮೃತ ಮಹಿಳೆ 19 ವರ್ಷಗಳ ಹಿಂದೆ ಮಲ್ಲಿಕಾರ್ಜುನ್ ಎಂಬುವವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ, ಎಂಟು ವರ್ಷಗಳ ಹಿಂದೆ ರಾಘವೇಂದ್ರ ಎಂಬಾತನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ ಯಮುನಾ, ಪತಿಯನ್ನು ಬಿಟ್ಟು ಐದು ವರ್ಷಗಳ ಕಾಲ ಆತನೊಂದಿಗೆ ದೊಡ್ಡಬಳ್ಳಾಪುರದಲ್ಲಿ ವಾಸವಿದ್ದರು ಎನ್ನಲಾಗಿದೆ.
ಬಳಿಕ ಎರಡು ವರ್ಷಗಳ ಹಿಂದೆ ಯಮುನಾ ಮರಳಿ ಪತಿಯ ಮನೆಗೆ ಬಂದು ಜೀವನ ನಡೆಸುತ್ತಿದ್ದರು. ಆದರೆ, ಕಳೆದ ಮಾರ್ಚ್ 21ರಂದು ಯಮುನಾ ಹುಟ್ಟುಹಬ್ಬ ಇತ್ತು. ಹೀಗಾಗಿ ಭೇಟಿ ಮಾಡುವಂತೆ ರಾಘವೇಂದ್ರ ಒತ್ತಾಯಿಸಿದ್ದ ಎನ್ನಲಾಗಿದೆ. ಕೆಲಸ ಮುಗಿಸಿ ಆತನನ್ನು ಭೇಟಿ ಮಾಡಲು ಹೋದ ಯಮುನಾ ಅಂದಿನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ತುಮಕೂರು ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು.
ಇದೀಗ ಹಳೇ ನಿಜಗಲ್ ಗ್ರಾಮದ ಅಡಿಕೆ ತೋಟದ ಪಕ್ಕದಲ್ಲಿ ಯಮುನಾ ತಲೆಬುರುಡೆ ಹಾಗೂ ಕೈಕಾಲುಗಳ ಮೂಳೆಗಳು ಪತ್ತೆಯಾಗಿವೆ. ಮೂಳೆಗಳ ಪಕ್ಕದಲ್ಲೇ ಆಕೆಯ ಬ್ಯಾಗ್ ಹಾಗೂ ಐಡಿ ಕಾರ್ಡ್ ಸಿಕ್ಕಿದ್ದರಿಂದ, ಯಮುನಾ ಎಂದೇ ಗುರುತಿಸಲಾಗಿದೆ. ಪೊಲೀಸರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಬಂದ ಕುಟುಂಬಸ್ಥರು ಮೃತದೇಹವನ್ನು ಗುರುತಿಸಿದ್ದಾರೆ.
ಸ್ಥಳಕ್ಕೆ ಡಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ರಾಘವೇಂದ್ರ ಎಂಬಾತನೇ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಅಡಿಕೆ ತೋಟದ ಬಳಿ ಎಸೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ : ಕೆರೆಯಲ್ಲಿ ಕುರಿ ಮೈತೊಳೆಯಲು ಹೋಗಿದ್ದ ಸಹೋದರರು ನೀರುಪಾಲು!



















