ಹಾಸನ : ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯ ನಡುವೆಯೇ ಭೀಕರ ದುರಂತವೊಂದು ಸಂಭವಿಸಿದೆ. ಕಾರ್ಯಾಚರಣೆಗೆಂದು ಕರೆತರಲಾಗಿದ್ದ ಸಾಕಾನೆ ಸುಗ್ರೀವ, ತನ್ನದೇ ಕಾವಾಡಿಗನ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.
ಇಂದು (ಏಪ್ರಿಲ್ 16) ಬೆಳಿಗ್ಗೆ ಬಿಕ್ಕೋಡು ಗ್ರಾಮದ ತಾತ್ಕಾಲಿಕ ಆನೆ ಶಿಬಿರದಲ್ಲಿ ಆನೆಗಳಿಗೆ ಆಹಾರ ನೀಡುವ ವೇಳೆ ಈ ಘಟನೆ ನಡೆದಿದೆ. ಕಾವಾಡಿಗ ರಾಜು ಅವರು ಸುಗ್ರೀವನಿಗೆ ಆಹಾರ ನೀಡಲು ಹೋದಾಗ ಆನೆಯು ದಿಢೀರನೆ ಆಕ್ರೋಶಗೊಂಡು ತನ್ನ ದಂತದಿಂದ ರಾಜು ಅವರಿಗೆ ಇರಿದಿದೆ.
ಈ ಭಾಗದಲ್ಲಿ ಆತಂಕ ಸೃಷ್ಟಿಸಿದ್ದ ‘ನರಹಂತಕ ಒಂಟಿಕೋರೆ’ ಕಾಡಾನೆಯನ್ನು ಸೆರೆಹಿಡಿಯಲು ಸುಗ್ರೀವ ಸೇರಿದಂತೆ ಹಲವು ಸಾಕಾನೆಗಳನ್ನು ಕರೆತರಲಾಗಿತ್ತು. ನಿನ್ನೆ ಈ ಕಾಡಾನೆಯನ್ನು ಸೆರೆಹಿಡಿಯಲಾಗಿತ್ತಾದರೂ, ಅದು ಮತ್ತೆ ತಪ್ಪಿಸಿಕೊಂಡು ಹೋಗಿತ್ತು. ಇಂದು ಪುನಃ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದ್ದಾಗ ಈ ಅನಾಹುತ ಸಂಭವಿಸಿದೆ.
ಆನೆ ದಾಳಿಯಿಂದ ರಾಜು ಅವರಿಗೆ ತೀವ್ರವಾದ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಇದನ್ನೂ ಓದಿ : ಕ್ಯಾಬೇಜ್ ದರ ಪಾತಾಳಕ್ಕೆ.. ಜಾನುವಾರು ಬಿಟ್ಟು ಬೆಳೆ ನಾಶ ಮಾಡಿದ ರೈತರು


















