ಧಾರವಾಡ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಂದೇ ವಿದ್ಯಾಕಾಶಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಬೀದಿಗೆ ಇಳಿದಿದ್ದಾರೆ. ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಸುಮಾರು 2.84 ಲಕ್ಷ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆಗೆ ತಯಾರಿ ನಡೆಸಲಾಗಿದೆ.
ರಾಜ್ಯ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಇಂದು ಬೆಳಗ್ಗೆ 11.00 ಗಂಟೆಗೆ ಧಾರವಾಡದ ಜಯನಗರ ಸರ್ಕಲ್ ನಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಪ್ರತಿಭಟನೆ ಆರಂಭಕ್ಕೂ ಮುನ್ನವೇ ಪೊಲೀಸ್ ಇಲಾಖೆ ವಿದ್ಯಾರ್ಥಿ ಮುಖಂಡರಿಗೆ ನೋಟಿಸ್ ನೀಡಿದೆ.
ಪೊಲೀಸರ ನೋಟಿಸ್‌ನಿಂದಾಗಿ ಕೇಸ್ ದಾಖಲಾಗುವ ಭೀತಿ ಎದುರಾಗಿದ್ದು, ಸಾಮಾನ್ಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಡೌಟು. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವಿದ್ದರೂ ಪೊಲೀಸರ ನೋಟಿಸ್‌ನಿಂದಾಗಿ ಪ್ರತಿಭಟನೆಗೆ ಬರಲು ಹಿಂಜರಿಕೆ, ಆದರೆ ಪೊಲೀಸರ ನೋಟಿಸ್‌ಗೂ ಮಣಿಯದ ವಿದ್ಯಾರ್ಥಿ ಮುಖಂಡರು ಹೋರಾಟ ಮುಂದುವರಿಸಲು ಸನ್ನದ್ಧರಾಗಿದ್ದಾರೆ.
ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಜಯನಗರ ಕ್ರಾಸ್‌ನಲ್ಲಿ ಪ್ರತಿಭಟನೆಗೆ ಮುಂದಾದ ಇಬ್ಬರು ವಿದ್ಯಾರ್ಥಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆ ನಡೆಯುವ ಸಾಧ್ಯತೆ ಹಿನ್ನೆಲೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ : ಡಾ. BR ಅಂಬೇಡ್ಕರ್ ಜಯಂತಿ ಹಿನ್ನೆಲೆ ದಲಿತರ ಮನೆಯಲ್ಲಿ ಶಾಸಕ ಎ. ಮಂಜು ವಾಸ್ತವ್ಯ



















