ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಶನಿವಾರ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಕ್ಷರಶಃ ಅಬ್ಬರಿಸಿದ್ದು, ಸಿಎಸ್‌ಕೆ ಪರ ತಮ್ಮ ಚೊಚ್ಚಲ ಶತಕವನ್ನು ದಾಖಲಿಸುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ರಸದೌತಣ ನೀಡಿದ್ದಾರೆ. ಇದು ಈ ಬಾರಿಯ ಐಪಿಎಲ್ ಸೀಸನ್‌ನ ಮೊದಲ ಶತಕ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆದು ಈ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಾಳಯ ಸೇರಿದ್ದ ಸಂಜು ಸ್ಯಾಮ್ಸನ್ ಮೇಲೆ ಭಾರೀ ನಿರೀಕ್ಷೆಗಳಿದ್ದವು. ಟಿ20 ವಿಶ್ವಕಪ್ 2026ರಲ್ಲಿ ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ್ದ ಸ್ಯಾಮ್ಸನ್, ಐಪಿಎಲ್‌ನ ಆರಂಭಿಕ ಮೂರು ಪಂದ್ಯಗಳಲ್ಲಿ ಕ್ರಮವಾಗಿ 6, 7 ಮತ್ತು 9 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಆದರೆ, ಶನಿವಾರದ ಪಂದ್ಯದಲ್ಲಿ ವಿಮರ್ಶಕರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ ಅವರು, ಕೇವಲ 52 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆಹೋದ ಸ್ಯಾಮ್ಸನ್, ಡೆಲ್ಲಿ ಬೌಲರ್‌ಗಳನ್ನು ಕಂಗೆಡಿಸಿದರು.
ಬೌಲರ್‌ಗಳ ಬೆವರಿಳಿಸಿದ ಆಕರ್ಷಕ ಬ್ಯಾಟಿಂಗ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡಕ್ಕೆ ನಾಯಕ ಋತುರಾಜ್ ಗಾಯಕ್ವಾಡ್ ರನ್ ಗಳಿಸಲು ಪರದಾಡುತ್ತಿದ್ದಾಗ ಸ್ಯಾಮ್ಸನ್ ಆಸರೆಯಾದರು. ಪವರ್‌ಪ್ಲೇ ಅವಧಿಯಲ್ಲಿಯೇ ಬಿರುಸಿನ ಬ್ಯಾಟಿಂಗ್ ನಡೆಸಿದ ಅವರು ತಂಡದ ಮೊತ್ತವನ್ನು ಏರಿಸಿದರು. ತಮ್ಮ ಅಮೋಘ ಇನ್ನಿಂಗ್ಸ್‌ನಲ್ಲಿ ಒಟ್ಟು 14 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ ಸ್ಯಾಮ್ಸನ್, ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಈ ಮಧ್ಯೆ 52 ರನ್ ಗಳಿಸಿದ್ದಾಗ ಜೀವದಾನ ಪಡೆದ ಅವರು, ನಂತರ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿದರು. ಆಯುಷ್ ಮ್ಹಾತ್ರೆ ಜೊತೆಗೂಡಿ ಭರ್ಜರಿ ಜೊತೆಯಾಟವಾಡಿದ ಸ್ಯಾಮ್ಸನ್, ತಂಡವು ಬೃಹತ್ ಮೊತ್ತದತ್ತ ಸಾಗಲು ಪ್ರಮುಖ ಕಾರಣರಾದರು.
ಚೆಪಾಕ್ ಅಂಗಳದಲ್ಲಿ ಸಂಭ್ರಮದ ಅಲೆ
ಸಂಜು ಸ್ಯಾಮ್ಸನ್ ತಮ್ಮ ಶತಕವನ್ನು ಪೂರೈಸುತ್ತಿದ್ದಂತೆ ಚೆಪಾಕ್ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಎದ್ದು ನಿಂತು ಹರ್ಷೋದ್ಗಾರ ಮಾಡಿದರು. ಟಿ. ನಟರಾಜನ್ ಅವರ ಓವರ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್ ಸಿಡಿಸುವ ಮೂಲಕ 90ರ ಗಡಿ ದಾಟಿದ ಅವರು, ಆಕರ್ಷಕ ಬೌಂಡರಿಯೊಂದಿಗೆ ಶತಕದ ಸಂಭ್ರಮ ಆಚರಿಸಿದರು. ಸಿಎಸ್‌ಕೆ ಪರ ಮೊದಲ ಶತಕ ಸಿಡಿಸಿದ ಸಂಜು, ತಮ್ಮ ಮೇಲಿದ್ದ ಒತ್ತಡವನ್ನು ನಿವಾರಿಸಿಕೊಳ್ಳುವುದಲ್ಲದೆ ತಂಡಕ್ಕೆ ಆನೆಬಲ ತಂದಿದ್ದಾರೆ. ಈ ಸ್ಫೋಟಕ ಇನ್ನಿಂಗ್ಸ್ ಮುಂಬರುವ ಪಂದ್ಯಗಳಲ್ಲಿ ಚೆನ್ನೈ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.
ಇದನ್ನೂ ಓದಿ: ಬುಮ್ರಾ ವಿಕೆಟ್ ಬರ : ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಆತಂಕವಿಲ್ಲ ಎಂದ ಕಿರನ್ ಪೋಲಾರ್ಡ್



















