ಕನ್ನಡ ಹಾಗೂ ತೆಲುಗಿನಲ್ಲಿ ಪ್ರಸಿದ್ಧಿ ಪಡೆದಿರುವ ಖ್ಯಾತ ಗಾಯಕಿ ಮಂಗ್ಲಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಹೈದರಾಬಾದ್‌ನ ಪುಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಸಿಂಗರ್ ಮಂಗ್ಲಿ ವಿರುದ್ಧ ಕೇಸ್ ದಾಖಲಾಗಿದ್ದು, ಹೂಡಿಕೆ ಹಗರಣ ಹಾಗೂ ಬೆದರಿಕೆ ಆರೋಪ ಕೇಳಿಬಂದಿದೆ.
ತಮ್ಮನ್ನೂ ಸೇರಿದಂತೆ ಹಲವು ಹೂಡಿಕೆದಾರರಿಗೆ 10 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಅಡ್ವೊಕೇಟ್ ಸುಬ್ಬಾರಾವ್ ಎಂಬುವರು ಮಂಗ್ಲಿ ಮತ್ತು ಇತರರ ವಿರುದ್ಧ ಆರೋಪ ಮಾಡಿದ್ದಾರೆ.
ದೂರುದಾರರ ಆರೋಪ ಏನು?
ಮೈಕ್ರೋ ಫೈನಾನ್ಸ್ ಹಾಗೂ ಬಿಸಿನೆಸ್ ಹೂಡಿಕೆ ಸ್ಕೀಮ್‌ಗೆ ಸೇರುವಂತೆ, ಹೆಚ್ಚಿನ ಬಡ್ಡಿ ನೀಡುವುದಾಗಿ ಆಸೆ ತೋರಿಸಿ, ರಿಯಲ್ ಎಸ್ಟೇಟ್-ಟ್ರೇಡಿಂಗ್ – ಇಂಪೋರ್ಟ್-ಎಕ್ಸ್‌ಪೋರ್ಟ್‌ಗಳಲ್ಲಿ ಹೂಡಿಕೆ ಮಾಡಿದರೆ ಅಧಿಕ ದುಡ್ಡು ಕೊಡಿಸುವುದಾಗಿ ಆಮಿಷವೊಡ್ಡಿ ಸುಮಾರು 100ರಿಂದ 150 ಮಂದಿಗೆ ವಂಚಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಆಡಿದ ಮಾತಿನಂತೆ ಲಾಭ ಸಿಕ್ಕಿಲ್ಲ, ನೀಡಿರುವ ಹಣವೂ ಈಗ ವಾಪಸ್ ಬಂದಿಲ್ಲ ಎಂದು ದೂರುದಾರರು ಪೊಲೀಸರ ಮೊರೆ ಹೋಗಿದ್ದಾರೆ. ಕೊಟ್ಟ ಹಣ ವಾಪಸ್ ಕೇಳಿದಾಗ ತಮಗೆ ಕೊಲೆ ಬೆದರಿಕೆ ಬಂದಿದೆ ಎಂದು ಅಡ್ವೊಕೇಟ್ ಸುಬ್ಬಾರಾವ್ ಆರೋಪ ಮಾಡಿದ್ದಾರೆ. ಗಾಯಕಿ ಮಂಗ್ಲಿ, ಸಹೋದರ ಶಿವ ಮತ್ತು ಇತರರು ತಮಗೆ ಬೆದರಿಕೆ ಹಾಕಿರುವುದಾಗಿ ಅಡ್ವೊಕೇಟ್ ಸುಬ್ಬಾರಾವ್ ಆರೋಪಿಸಿದ್ದಾರೆ.
“ನನಗೆ ಆಕ್ಸಿಡೆಂಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ದೂರನ್ನು ಹಿಂಪಡೆಯುವಂತೆ ನನಗೆ ಹಣ ನೀಡಲಾಗಿತ್ತು. ಆದರೆ, ನಾನು ಯಾವಾಗ ಅದನ್ನ ನಿರಾಕರಿಸಿದ್ನೋ.. ಆಗ ಬೆದರಿಕೆಗಳು ಮುಂದುವರೆದವು. ಹೀಗಾಗಿ ಪೊಲೀಸರ ರಕ್ಷಣೆ ಕೋರಿದ್ದೇನೆ” ಎಂದು ಅಡ್ವೊಕೇಟ್ ಸುಬ್ಬಾರಾವ್ ತಿಳಿಸಿದ್ದಾರೆ. ದೂರಿನನ್ವಯ ಗಾಯಕಿ ಮಂಗ್ಲಿ, ಸಹೋದರ ಶಿವ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ : ಬೆಣ್ಣೆ ನಗರಿಯಲ್ಲಿ ಹೆಚ್ಚಾಯ್ತು ಗ್ಯಾಸ್ ಟ್ರಬಲ್.. ದಿಕ್ಕೇ ತೋಚದಂತಾದ ಬೀದಿ ಬದಿ ವ್ಯಾಪಾರಿಗಳು!



















