ಮುಂಬೈ : ಬಾಲಿವುಡ್‌ನ ಪವರ್ ಕಪಲ್ ಎನಿಸಿಕೊಂಡಿರುವ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಡುವೆ ಎಲ್ಲವೂ ಸರಿಯಿಲ್ಲವೇ ಎಂಬ ಗಾಸಿಪ್‌ಗಳಿಗೆ ದೀಪಿಕಾ ಈಗ ಪೂರ್ಣವಿರಾಮ ಇಟ್ಟಿದ್ದಾರೆ. ರಣವೀರ್ ಸಿಂಗ್ ಅಭಿನಯದ ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ‘ಧುರಂಧರ್ 2’ ಯಶಸ್ಸಿನ ಬಗ್ಗೆ ದೀಪಿಕಾ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಕದಿದ್ದಕ್ಕೆ ನೆಟ್ಟಿಗರು ಅವರನ್ನು ತೀವ್ರವಾಗಿ ಟ್ರೋಲ್ ಮಾಡಿದ್ದರು. ಈ ಬಗ್ಗೆ ಈಗ ಪ್ರತಿಕ್ರಿಯಿಸಿರುವ ದೀಪಿಕಾ, ಟ್ರೋಲಿಗರಿಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.
ರಣವೀರ್ ಸಿಂಗ್ ಅವರ 1000 ಕೋಟಿ ರೂ. ಗಳಿಕೆಯ(ಭಾರತದಲ್ಲಿ) ‘ಧುರಂಧರ್ 2’ ಸಿನಿಮಾದ ಬಗ್ಗೆ ದೀಪಿಕಾ ಏಕೆ ಮೌನವಾಗಿದ್ದಾರೆ? ಇದು ಉದ್ದೇಶಪೂರ್ವಕವೇ? ಎಂಬ ಚರ್ಚೆಗಳು ಇಂಟರ್ನೆಟ್‌ನಲ್ಲಿ ಜೋರಾಗಿ ಕೇಳಿಬಂದಿದ್ದವು. ಈ ಕುರಿತಾದ ಇನ್‌ಸ್ಟಾಗ್ರಾಮ್ ವಿಡಿಯೋವೊಂದಕ್ಕೆ ಮಂಗಳವಾರ ರಾತ್ರಿ ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿರುವ ದೀಪಿಕಾ, “ನನ್ನ ಗೆಳೆಯಾ, ನೀವೆಲ್ಲರೂ ನೋಡುವ ಮುನ್ನವೇ ನಾನು ಈ ಚಿತ್ರವನ್ನು ನೋಡಿದ್ದೇನೆ. ಈಗ ನಗೆಪಾಟಲಿಗೀಡಾದವರು ನೀವೇ” ಎಂದು ಕಿಚಾಯಿಸುವ ಮೂಲಕ ತಮ್ಮ ಮೌನದ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ. ಕೇವಲ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡದಿದ್ದಕ್ಕೆ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಹಬ್ಬಿದ್ದ ವದಂತಿಗಳಿಗೆ ಅವರು ಈ ಮೂಲಕ ತೆರೆ ಎಳೆದಿದ್ದಾರೆ. ಅಲ್ಲದೆ, ಟ್ರೋಲ್‌ಗಳನ್ನೇ ದೀಪಿಕಾ ಟ್ರೋಲ್ ಮಾಡಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್’ ಅಬ್ಬರ
ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಆಕ್ಷನ್ ಥ್ರಿಲ್ಲರ್ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ರಣವೀರ್ ಸಿಂಗ್ ಅವರ ಜಸ್ಕಿರತ್ ಸಿಂಗ್ ರಂಗಿ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಚಿತ್ರದಲ್ಲಿ ಅರ್ಜುನ್ ರಾಂಪಾಲ್, ಆರ್. ಮಾಧವನ್ ಮತ್ತು ಸಂಜಯ್ ದತ್ ಅವರಂತಹ ದಿಗ್ಗಜ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಧುರಂಧರ್ 2: ದಿ ರಿವೆಂಜ್’ ಈಗಾಗಲೇ ವಿಶ್ವದಾದ್ಯಂತ 1000 ಕೋಟಿಗೂ ಅಧಿಕ ಹಣವನ್ನು ಲೂಟಿ ಮಾಡಿ ರಣವೀರ್ ವೃತ್ತಿಜೀವನದ ಅತಿದೊಡ್ಡ ಹಿಟ್ ಎನಿಸಿಕೊಂಡಿದೆ.
ಒಟಿಟಿಗೆ ಬರಲಿದೆ ರಣವೀರ್ ಸಿನಿಮಾ
ಸಿನಿಮಾದ ಯಶಸ್ಸಿನ ನಡುವೆಯೇ ಇದರ ಒಟಿಟಿ ಪ್ರಸಾರದ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ‘ಧುರಂಧರ್’ ಮೊದಲ ಭಾಗವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ಆದರೆ ಎರಡನೇ ಭಾಗಕ್ಕಾಗಿ ಜಿಯೋಹಾಟ್‌ಸ್ಟಾರ್ ಬರೋಬ್ಬರಿ 150 ಕೋಟಿ ರೂ. ನೀಡಿ ಡಿಜಿಟಲ್ ಹಕ್ಕುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ಇದು ಮೊದಲ ಭಾಗಕ್ಕಿಂತ ಎರಡು ಪಟ್ಟು ಹೆಚ್ಚು ಮೊತ್ತವಾಗಿದೆ. ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವು ಮುಂದಿನ ಎಂಟು ವಾರಗಳ ಒಳಗೆ ಒಟಿಟಿ ವೇದಿಕೆಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : 90 ನಿಮಿಷಗಳ ಅಂತರದಲ್ಲಿ ತಪ್ಪಿದ ಮಹಾಯುದ್ಧ.. ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿದ ಟ್ರಂಪ್!



















