ಬೆಂಗಳೂರು : ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಹಸಿ ತ್ಯಾಜ್ಯದಿಂದ ರಾಜ್ಯದಲ್ಲಿ LPG ಸಿಲಿಂಡರ್‌ಗಳ ಅವಶ್ಯಕತೆಯೇ ಇಲ್ಲದಂತೆ ಮಾಡಬಹುದಾಗಿರುವ ಪರಿಸರ ಸ್ನೇಹಿ ಕಾರ್ಯಕ್ರಮವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕೆಂದು ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಆಗ್ರಹಿಸಿದ್ದಾರೆ.
ಕೇವಲ ಬೆಂಗಳೂರು ಮಹಾನಗರದಲ್ಲಿ ಮಾತ್ರವೇ ಪ್ರತಿನಿತ್ಯ ಒಂದು ಸಾವಿರ ಟನ್‌ಗಿಂತಲೂ ಹೆಚ್ಚು ಪ್ರಮಾಣದ ಹಸಿ ತ್ಯಾಜ್ಯವು ಸಂಗ್ರಹವಾಗುತ್ತಿದೆ. ಈ ಪ್ರಮಾಣದ ಹಸಿ ತ್ಯಾಜ್ಯದಿಂದ ಪ್ರತಿನಿತ್ಯ ಕನಿಷ್ಠ 20 ಲೀಟರ್ ಸಾಮರ್ಥ್ಯದ ಸುಮಾರು 14 ಲಕ್ಷ ಸಿಲಿಂಡರ್ ಗಳಿಗಾಗುವಷ್ಟು ಮೀಥೇನ್ ಅನಿಲವನ್ನು ಉತ್ಪಾದಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಅಮೆರಿಕ, ಇಸ್ರೇಲ್ ಮತ್ತು ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮದಿಂದಾಗಿ ಭಾರತ ದೇಶವು LPG ಮತ್ತು CNG ಅನಿಲಗಳ ಕೊರತೆಯನ್ನು ಬೃಹತ್ ಪ್ರಮಾಣದಲ್ಲಿ ಎದುರಿಸುತ್ತಿದ್ದು, ಅದರಿಂದ ಆಗಿರುವ ಮತ್ತು ಆಗುತ್ತಿರುವ ಪರಿಣಾಮಗಳ ಬಗ್ಗೆ ನಮಗೆಲ್ಲಾ ತಿಳಿದಿರುವ ವಿಷಯವೇ ಆಗಿದೆ. ವಾಸ್ತವವಾಗಿ ನಮಗೆ ಅವಶ್ಯಕತೆ ಇರುವ LPG/CNG ಅನಿಲ ಪೂರೈಕೆಗೆ ಬೇರೆ ದೇಶಗಳನ್ನು ಅವಲಂಭಿಸದೇ ನಮ್ಮಲ್ಲಿಯೇ ಉತ್ಪತ್ತಿಯಾಗುವ ಹಸಿ ತ್ಯಾಜ್ಯದಿಂದಲೇ ನಮಗೆ ಅವಶ್ಯಕತೆ ಇರುವಷ್ಟು ಪ್ರಮಾಣದ ಮೀಥೇನ್ ಅನಿಲವನ್ನು ಪ್ರತಿನಿತ್ಯವು ಉತ್ಪಾದಿಸಬಹುದಾಗಿದೆ ಎಂದು ಎನ್.ಆರ್ ರಮೇಶ್ ಪತ್ರದಲ್ಲಿ ತಿಳಿಸಿದ್ದಾರೆ.

ಉದಾಹರಣೆಗೆ, “ದಕ್ಷಿಣ ಭಾರತದ ಮಾದರಿ ವಾರ್ಡ್”ಎಂಬ ಖ್ಯಾತಿಗೆ ಪಾತ್ರವಾಗಿರುವ ಮತ್ತು “ಭಾರತ ದೇಶದಲ್ಲಿ ತ್ಯಾಜ್ಯದಿಂದ ವಿದ್ಯುತ್ ಚ್ಛಕ್ತಿಯನ್ನು ತಯಾರಿಸುತ್ತಿರುವ ಏಕೈಕ ವಾರ್ಡ್”ಎಂಬ ಖ್ಯಾತಿಗೆ ಪಾತ್ರವಾಗಿರುವ “ಯಡಿಯೂರು ವಾರ್ಡ್”ನಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ 05 ಟನ್ ಪ್ರಮಾಣದ ಹಸಿ ತ್ಯಾಜ್ಯದಿಂದ ಪ್ರತಿನಿತ್ಯ 3,000 Kilowatt ವಿದ್ಯುತ್ ಚ್ಛಕ್ತಿಯನ್ನು ಉತ್ಪಾದಿಸಲಾಗುತ್ತಿದೆ. ಆ ಮೂಲಕ ಯಡಿಯೂರು ವಾರ್ಡ್ ವ್ಯಾಪ್ತಿಯ 16 ಉದ್ಯಾನವನಗಳು ಮತ್ತು ಮೂರೂವರೆ ಕಿ. ಮೀ. ಉದ್ದದ ಪಾದಚಾರಿ ಮಾರ್ಗಗಳಿಗೆ ಇದೇ ವಿದ್ಯುತ್ ಚ್ಛಕ್ತಿಯನ್ನು ಪೂರೈಸುತ್ತಿರುವುದರಿಂದ 16 ಉದ್ಯಾನವನಗಳು ಮತ್ತು ಮೂರೂವರೆ ಕಿ. ಮೀ. ಉದ್ದದ ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ “BESCOM ವಿದ್ಯುತ್ ಚ್ಛಕ್ತಿ ಮುಕ್ತ ವಾರ್ಡ್”ಅನ್ನಾಗಿ ಮಾಡಲಾಗಿದೆ.
ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ 05 ಟನ್ ಹಸಿ ತ್ಯಾಜ್ಯದಿಂದ ಪ್ರತೀ ನಿತ್ಯ 4,500 ಲೀಟರ್ ಗಳಷ್ಟು ಪ್ರಮಾಣದಲ್ಲಿ ಮೀಥೇನ್ ಅನಿಲವನ್ನು ಉತ್ಪಾದಿಸಲಾಗುತ್ತಿದೆ. ಅದರಂತೆ, 20 ಲೀಟರ್ ಸಾಮರ್ಥ್ಯದ 225 ಸಿಲಿಂಡರ್ ಗಳಲ್ಲಿ 4,500 ಲೀಟರ್ ಗಳಷ್ಟು ಪ್ರಮಾಣದ ಮೀಥೇನ್ ಗ್ಯಾಸ್‌ನ್ನು ತುಂಬಿಸಬಹುದಾಗಿದ್ದು, ಪ್ರತಿ ತಿಂಗಳಿಗೆ ಕನಿಷ್ಠ 6,750 ಸಿಲಿಂಡರ್ ಗಳಲ್ಲಿ ಈ ಮೀಥೇನ್ ಗ್ಯಾಸ್‌ನ್ನು ತುಂಬಿಸಿ ನಾಗರಿಕರಿಗೆ ಪೂರೈಕೆ ಮಾಡಬಹುದು.
ಇದೇ ಮಾದರಿಯಲ್ಲಿ, ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲ 198 ವಾರ್ಡ್ ಗಳ ವ್ಯಾಪ್ತಿಯಲ್ಲಿ ಗರಿಷ್ಠ 2,400 ಚ. ಅಡಿಗಳಷ್ಟು ವಿಸ್ತೀರ್ಣದ ಸರ್ಕಾರಿ ಸ್ಥಳಗಳನ್ನು ಗುರುತಿಸಿ, ಆ ಸ್ಥಳಗಳಲ್ಲಿ “ಜೈವಿಕ ಅನಿಲ ಘಟಕ”ಗಳನ್ನು ಸ್ಥಾಪಿಸಿ ಆಯಾ ವಾರ್ಡ್ ಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಮೀಥೇನ್ ಅನಿಲವನ್ನಾಗಿ ಪರಿವರ್ತಿಸಿದ್ದಲ್ಲಿ, ಪ್ರತಿ ತಿಂಗಳು ತಲಾ 20 ಲೀಟರ್ ಸಾಮರ್ಥ್ಯದ ಕನಿಷ್ಠ 14 ಲಕ್ಷ ಸಿಲಿಂಡರ್ ಗಳಲ್ಲಿ ಮೀಥೇನ್ ಅನಿಲವನ್ನು ತುಂಬಿಸಲು ಸಾಧ್ಯವಿರುತ್ತದೆ.
ಈ ರೀತಿ ಪರಿಸರಕ್ಕೆ ಪೂರಕವಾದ ಯೋಜನೆಯನ್ನು ಪರಿಣಾಮಕಾರಿಯಾಗಿ ಸಿದ್ಧರಾಮಯ್ಯನವರ ಸರ್ಕಾರವು ಅನುಷ್ಠಾನಗೊಳಿಸಿದರೆ, ಕೇವಲ ಬೆಂಗಳೂರು ಮಹಾನಗರದಲ್ಲಿ ಮಾತ್ರವೇ ಪ್ರತಿ ತಿಂಗಳು 14 ಲಕ್ಷ ಕುಟುಂಬಗಳಿಗೆ LPG ಸಿಲಿಂಡರ್‌ಗಳಿಗೆ ತಗುಲುವ ಶೇ. 50% ರಷ್ಟು ಪ್ರಮಾಣದಲ್ಲಿಯೇ ಬೆಂಗಳೂರು ನಾಗರಿಕರಿಗೆ ಯಶಸ್ವಿಯಾಗಿ ತಲುಪಿಸುವ ಮೂಲಕ ಬೆಂಗಳೂರು ಮಹಾನಗರವನ್ನು LPG ಅನಿಲ ಮುಕ್ತ ನಗರವನ್ನಾಗಿ ಮಾಡಲು ಅವಕಾಶವಿರುತ್ತದೆ.
ಕೇವಲ 75 ಲಕ್ಷದಿಂದ ಒಂದು ಕೋಟಿ ರೂಪಾಯಿ ವೆಚ್ಛದೊಳಗೆ ತಲಾ 05 ರಿಂದ 10 ಟನ್ ಸಾಮರ್ಥ್ಯದ “ಜೈವಿಕ ಅನಿಲ ಘಟಕ”ಗಳನ್ನು ನಿರ್ಮಿಸಬಹುದಾಗಿದ್ದು, 200 ಕೋಟಿ ರೂಪಾಯಿಗಳಷ್ಟು ಪ್ರಮಾಣದ ಅನುದಾನದಿಂದ ಬೆಂಗಳೂರಿನ ಹಳೆಯ 198 ವಾರ್ಡ್ ಗಳಲ್ಲಿ “198 ಜೈವಿಕ ಅನಿಲ ಘಟಕ”ಗಳನ್ನು ಸ್ಥಾಪಿಸಬಹುದಾಗಿರುತ್ತದೆ ಮತ್ತು ಆ ಮೂಲಕ ಬೆಂಗಳೂರು ಮಹಾನಗರದಲ್ಲಿನ LPG / CNG ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಆದ್ದರಿಂದ ಈಗಾಗಲೇ ಪ್ರತಿನಿತ್ಯ 4,500 ಲೀಟರ್ ಗಳಿಗಿಂತಲೂ ಹೆಚ್ಚು ಪ್ರಮಾಣದ ಮೀಥೇನ್ ಅನಿಲವನ್ನು ಉತ್ಪಾದಿಸುವ ಮೂಲಕ ದೇಶಕ್ಕೇ ಮಾದರಿಯಾಗಿರುವ ಯಡಿಯೂರು ವಾರ್ಡಿನ ಯಶೋಗಾಥೆಯನ್ನು ಆದರ್ಶವನ್ನಾಗಿ ಪರಿಗಣಿಸಿ, ಬೆಂಗಳೂರು ಮಹಾನಗರದ ಎಲ್ಲಾ ಹಳೆಯ 198 ವಾರ್ಡ್ ಗಳ ವ್ಯಾಪ್ತಿಯಲ್ಲಿ “ಜೈವಿಕ ಅನಿಲ ಘಟಕ”ಗಳನ್ನು ಸ್ಥಾಪಿಸುವ ಮೂಲಕ ಇಂತಹ ಪರಿಸರ ಸ್ನೇಹಿ ಯೋಜನೆಯನ್ನು ಅನುಷ್ಠಾನಗೊಳಿಸಿದ ಪ್ರಪ್ರಥಮ ರಾಜ್ಯ ಎಂಬ ಖ್ಯಾತಿಗೆ ಕರ್ನಾಟಕ ರಾಜ್ಯವು ಪಾತ್ರವಾಗುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಎನ್.ಆರ್ ರಮೇಶ್ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಜನಗಣತಿಗೆ ಸಿಬ್ಬಂದಿ ಬಳಕೆ.. ಹಕ್ಕು ಉಲ್ಲಂಘನೆ ಆಗ್ತಿದೆಯಾ? ಸಿಎಸ್‌ಗೆ ಪತ್ರ ಬರೆದು ಕಲ್ಲಹಳ್ಳಿ ಉಲ್ಲೇಖಿಸಿದ್ದೇನು?


















