ಬೆಂಗಳೂರು : ರಾಜ್ಯ ಮಾನವ ಹಕ್ಕು ಆಯೋಗದ ಕಾರ್ಯಚಟುವಟಿಕೆಗಳಿಗೆ ತೀವ್ರ ಅಡ್ಡಿಯಾಗುವ ರೀತಿಯಲ್ಲಿ ಸಿಬ್ಬಂದಿಯನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಿರುವುದರಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ದೂರುಗಳ ಸ್ವೀಕಾರ, ಪರಿಶೀಲನೆ ಮತ್ತು ವಿಚಾರಣೆ ಪ್ರಕ್ರಿಯೆಗಳಲ್ಲಿ ವಿಳಂಬ ಉಂಟಾಗಿ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ. ಈ ಹಿನ್ನಲೆಯಲ್ಲಿ ಆಯೋಗದ ಸ್ವಾಯತ್ತತೆ ಮತ್ತು ಕಾರ್ಯಕ್ಷಮತೆಯನ್ನು ಕಾಪಾಡಲು ತಕ್ಷಣ ಸಿಬ್ಬಂದಿಯನ್ನು ಮರುನಿಯೋಜಿಸಿ,ಕಾನೂನುಬದ್ದ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.

ಸಂವಿಧಾನ ಮತ್ತು ‘Protection of Human Rights Act, 1993’ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಆಯೋಗವು ಪೊಲೀಸ್ ಅತಿರೇಕ, ಅಕ್ರಮ ಬಂಧನ, ಕಸ್ಟಡಿಯಲ್ಲಿ ಹಿಂಸೆ ಸೇರಿದಂತೆ ಗಂಭೀರ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳನ್ನು ವಿಚಾರಣೆ ಮಾಡುವ ಮಹತ್ವದ ಜವಾಬ್ದಾರಿಯನ್ನು ಹೊಂದಿದೆ. ಸಿವಿಲ್ ನ್ಯಾಯಾಲಯದ ಅಧಿಕಾರಗಳನ್ನು ಹೊಂದಿರುವ ಆಯೋಗವು ತ್ವರಿತ ಕ್ರಮ ಕೈಗೊಳ್ಳಬೇಕಾದ ಸಂದರ್ಭಗಳಲ್ಲಿ ಈಗ ನಿರ್ಜೀವ ಸ್ಥಿತಿಗೆ ತಲುಪಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ತಿಳಿಸಿದ್ದಾರೆ.

ಆಯೋಗದಲ್ಲಿ ಅತಿ ಕಡಿಮೆ ಸಿಬ್ಬಂದಿ ಮಾತ್ರ ಉಳಿದಿರುವುದರಿಂದ ಹೊಸ ದೂರುಗಳನ್ನು ದಾಖಲಿಸುವುದು, ತುರ್ತು ಪರಿಶೀಲನೆಗಳು (spot inspection) ನಡೆಸುವುದು ಹಾಗೂ ಬಾಕಿ ಇರುವ ಪ್ರಕರಣಗಳ ವಿಚಾರಣೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಾಗರಿಕರ ಮಾನವ ಹಕ್ಕುಗಳ ರಕ್ಷಣೆಗೆ ನೇರ ಹಾನಿ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಪೊಲೀಸ್ ಇಲಾಖೆಯ ಅತಿರೇಕ ಮತ್ತು ಅಕ್ರಮ ಬಂಧನದಂತಹ ಪ್ರಕರಣಗಳಲ್ಲಿ ತಕ್ಷಣದ ಹಸ್ತಕ್ಷೇಪ ಅಗತ್ಯವಾಗಿರುವ ಸಂದರ್ಭಗಳಲ್ಲಿ, ಆಯೋಗದ ಕಾರ್ಯಕ್ಷಮತೆಯ ಕೊರತೆ ಸಂವಿಧಾನದ ವಿಧಿ 14 (ಸಮಾನತೆ ಹಕ್ಕು) ಮತ್ತು ವಿಧಿ 21 (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು)ಗಳ ಉಲ್ಲಂಘನೆಗೆ ಕಾರಣವಾಗಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜನಗಣತಿ ಕಾರ್ಯವು ರಾಷ್ಟ್ರ ಮಟ್ಟದಲ್ಲಿ ಮಹತ್ವದ್ದಾಗಿದ್ದರೂ, ಅದಕ್ಕಾಗಿ ಮಾನವ ಹಕ್ಕುಗಳಂತಹ ಸಂವೇದನಾಶೀಲ ಕ್ಷೇತ್ರದ ಸಂಸ್ಥೆಗಳ ಸಿಬ್ಬಂದಿಯನ್ನು ಬಳಸಿಕೊಳ್ಳುವುದು ಆಡಳಿತಾತ್ಮಕ ಸಮತೋಲನದ ಕೊರತೆಯನ್ನು ತೋರಿಸುತ್ತದೆ. ಮಾನವ ಹಕ್ಕುಗಳ ರಕ್ಷಣೆಯಂತಹ ನಿರಂತರ ಮತ್ತು ತುರ್ತು ಕಾರ್ಯಗಳನ್ನು ಯಾವುದೇ ಸಂದರ್ಭದಲ್ಲಿಯೂ ದುರ್ಬಲಗೊಳಿಸುವಂತಿಲ್ಲ ಎಂದು ತಿಳಿಸಿದ್ದಾರೆ. ಇದಲ್ಲದೆ, ಆಯೋಗದ ಕಾರ್ಯದರ್ಶಿಯವರು ಸಿಬ್ಬಂದಿಯನ್ನು ಜನಗಣತಿ ಕಾರ್ಯದಿಂದ ವಿನಾಯಿತಿ ನೀಡುವಂತೆ ಸಲ್ಲಿಸಿದ ಮನವಿಯನ್ನು ಸಂಬಂಧಿತ ಅಧಿಕಾರಿಗಳು ಪರಿಗಣಿಸದಿರುವುದು ಆಡಳಿತಾತ್ಮಕ ನಿರ್ಲಕ್ಷ್ಯವನ್ನು ಸೂಚಿಸುತ್ತದೆ ಎಂದು ಆರೋಪಿಸಿದ್ದಾರೆ.
ಕೆಳಕಂಡಂತೆ ತಕ್ಷಣ ಕ್ರಮ ಕೈಗೊಳ್ಳಿ : ದಿನೇಶ್ ಕಲ್ಲಹಳ್ಳಿ
- ರಾಜ್ಯ ಮಾನವ ಹಕ್ಕು ಆಯೋಗದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜನಗಣತಿ ಕಾರ್ಯಗಳಿಂದ
ತಕ್ಷಣ ವಿನಾಯಿತಿ ನೀಡುವುದು. - ಆಯೋಗದ ನಿರಂತರ ಕಾರ್ಯಾಚರಣೆಯನ್ನು ಖಚಿತಪಡಿಸಲು ಅಗತ್ಯವಿರುವ ಪರ್ಯಾಯ ಸಿಬ್ಬಂದಿಯನ್ನು
ತಕ್ಷಣ ನಿಯೋಜಿಸುವುದು. - ಈಗಾಗಲೇ ಬಾಕಿ ಇರುವ ಗಂಭೀರ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ
ವ್ಯವಸ್ಥೆ ಕಲ್ಪಿಸುವುದು. - ಭವಿಷ್ಯದಲ್ಲಿ ಈ ರೀತಿಯ ಪ್ರಮುಖ ಕಾನೂನು ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಸ್ಪಷ್ಟ
ಮಾರ್ಗಸೂಚಿಗಳನ್ನು ಹೊರಡಿಸುವುದು.
ಈ ವಿಷಯ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಪಟ್ಟದ್ದಾಗಿದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಗಳು ಹೆಚ್ಚುತ್ತಿವೆ.


















