ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಆರೋಪದ ಪ್ರಕರಣಗಳು ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಜಿಮ್ ಟ್ರೈನರ್ ಸಮೀರ್ ಮುಲ್ಲಾ ಬಳಿಕ ಮುಫೀಸ್ ಮಿಯಾನ್ನಾವರ್ ಎಂಬಾತ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನುವ ಆರೋಪ ಕೇಳಿ ಬಂದಿತ್ತು, ಇದೀಗ ಈ ಕೇಸ್‌ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಹುಬ್ಬಳ್ಳಿಯ ಮತ್ತೊಂದು ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಲವ್ ಜಿಹಾದ್ ಆರೋಪ ಹೊತ್ತಿರುವ ಆರೋಪಿ, ಮುಫೀಸ್ ಮಿಯಾನ್ನಾವರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಬ್ಲಾಕ್ ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಆರೋಪದಡಿ ದೂರು ನೀಡಲಾಗಿದೆ. ಆದ್ರೀಗ ದೂರು ನೀಡಿದ್ದ ಸಂತ್ರಸ್ತ ಯುವತಿಯೇ ಅಚ್ಚರಿಯ ಹೇಳಿಕೆ ನೀಡಿದ್ದಾಳೆ.
ಲವ್ ಜಿಹಾದ್ ಆರೋಪ ಪ್ರಕರಣದಲ್ಲಿ ಆರೋಪಿಯಾಗಿರುವ ಮುಫೀಸ್ ಪರ ಹಿಂದೂ ಯುವತಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾಳೆ. ಕಣ್ಣೀರಿಡುತ್ತಾ ವಿಡಿಯೋ ಮಾಡಿರುವ ಯುವತಿ, ವಿಡಿಯೋದಲ್ಲಿ ನಡೆದ ಘಟನೆಗಳನ್ನು ಹೇಳಿಕೊಂಡಿದ್ದಾಳೆ. ಅಲ್ಲದೇ ಯುವಕನ ಮನೆಯವರು ಮದುವೆಗೆ ಒಪ್ಪದಾಗ ಸಂತ್ರಸ್ತ ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಈ ಬಗ್ಗೆ ವಿಡಿಯೋ ಮಾಡಿರುವ ಯುವತಿ, ಧಾರವಾಡದಲ್ಲಿ ರಿಜಿಸ್ಟ್ರಾರ್ ಮದುವೆ ಆಗಲು ಸಿದ್ಧತೆ ನಡೆಸಲಾಗಿತ್ತು, 30 ದಿನಗಳ ಸಮಯ ಇದ್ದ ವೇಳೆ ಹಿಂದೂ ಸಂಘಟನೆಗಳು ಮನೆಗೆ ಬಂದಿದ್ದರು, ನನ್ನನ್ನು ಬೇರೆ ಮನೆಗೆ ಕರೆದೊಯ್ದು ಕೌನ್ಸಿಲಿಂಗ್ ಕೂಡ ಮಾಡಿದ್ದರು. ಮುಫೀಸ್ ಮೇಲೆ ಕೇಸ್ ಮಾಡಲು ನನ್ನ ಒಪ್ಪಿಗೆ ಇರಲಿಲ್ಲ, ರಿಜಿಸ್ಟ್ರೇಷನ್ಗೆ ಮುಫೀಸ್ ಮನೆಯವರು ಬಂದಿದ್ದರು ಎಂದು ಹೇಳಿದ್ದಾಳೆ, ಆದ್ರೆ, ಇಷ್ಟೆಲ್ಲ ಬೆಳವಣಿಗೆ ನಂತರ ಇಂದು ಮುಫೀಸ್ ವಿರುದ್ಧ ಯುವತಿ ದೂರು ನೀಡಿದ್ದು, ದೂರು ನೀಡಲು ಬಲವಂತ ಮಾಡಲಾಯ್ತಾ ಅನ್ನೋ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ಓದಿ : ಪತಿಯ ಹತ್ಯೆಗೆ ಪ್ರಿಯಕರನಿಗೆ ಸಾಥ್ ನೀಡಿದ ಪತ್ನಿ – ಕೈ ಮೇಲಿದ್ದ ಹಚ್ಚೆ ಮೂಲಕ ಹಂತಕರ ಪತ್ತೆ!


















