ಹಾವೇರಿ : ಹಾವೇರಿ ನಗರದ ಬಸ್ ನಿಲ್ದಾಣದಲ್ಲಿ ಇಂದು (ಏಪ್ರಿಲ್ 1) ಮುಂಜಾನೆ ಸಂಭವಿಸಿದ ಭೀಕರ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 2 ವರ್ಷದ ಪುಟ್ಟ ಮಗು ಹಜರತ್ ಅಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಇಂದು ಮುಂಜಾನೆ ಸುಮಾರು 7 ಗಂಟೆಯ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್, ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲೆ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಏಕಾಏಕಿ ನುಗ್ಗಿದ್ದು, ಘಟನೆಯಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದರು. ಅದರಲ್ಲಿ 2 ವರ್ಷದ ಪುಟ್ಟ ಮಗು ಹಜರತ್ ಅಲಿಗೆ ಗಂಭೀರವಾಗಿ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಆದರೆ, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕಂದಮ್ಮ ಮೃತಪಟ್ಟಿದೆ.
ಉಳಿದ ಗಾಯಾಳುಗಳಾದ ವಾಸುದೇವ( 44), ಹರ್ಷಾ( 6), ಕಾವ್ಯಾಂಜಲಿಗೆ (39) ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಅಪಘಾತದ ಭೀಕರತೆಯನ್ನು ಸಾರಿ ಹೇಳುತ್ತಿವೆ. ಬಸ್ ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯತನವೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಸಾರ್ವಜನಿಕರು ಚಾಲಕನ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ಪಂಚಾಯತ್ ರಾಜ್ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ.. ಹೀಗೆ ಅರ್ಜಿ ಸಲ್ಲಿಸಿ!



















