ಬೆಂಗಳೂರಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ರಾಜಗೋಪಾಲ ನಗರ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ಪ್ಲಾಸ್ಟಿಕ್ ಫ್ಯಾಕ್ಟರಿಯ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದ ರಾಹುಲ್ ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಆರೋಪಿ ಹನುಮಂತಪ್ಪ (ಅಜಯ್) ವೆಲ್ಡಿಂಗ್ ಕೆಲಸ ಮಾಡುತ್ತಿದ್ದನು. ಸರಿಯಾಗಿ ಕೆಲಸಕ್ಕೆ ಬಾರದಿದ್ದ ಹನುಮಂತಪ್ಪ ಪದೇ ಪದೇ ರಜೆ ತೆಗೆದುಕೊಳ್ಳುತ್ತಿದ್ದ ಹಿನ್ನೆಲೆ, ಕೆಲಸಕ್ಕೆ ಸರಿಯಾಗಿ ಬರದಿದ್ದರೆ ಕೆಲಸ ಬಿಟ್ಟು ಹೋಗುವಂತೆ ರಾಹುಲ್ ಎಚ್ಚರಿಕೆ ನೀಡಿದ್ದನು. ಇದರಿಂದ ಕೋಪಗೊಂಡ ಹನುಮಂತಪ್ಪ ಕೆಲಸ ತೊರೆದಿದ್ದನು. ಈ ವಿಷಯವನ್ನೇ ಇಟ್ಟುಕೊಂಡು ರಾಹುಲ್ ವಿರುದ್ಧ ವೈಷಮ್ಯ ಬೆಳೆಸಿಕೊಂಡಿದ್ದನು ಎನ್ನಲಾಗಿದೆ.
ಮಾ. 30ರ ರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಅದು ವಿಕೋಪಕ್ಕೆ ತಲುಪಿದೆ. ಮಾ.31ರ ರಾತ್ರಿ ಸುಮಾರು 9 ಗಂಟೆಯ ವೇಳೆ ಲಾರಿಯಲ್ಲಿ ಬಂದಿದ್ದ ಸರಕು ಇಳಿಸುತ್ತಿದ್ದ ಸಂದರ್ಭದಲ್ಲೇ ಹನುಮಂತಪ್ಪ ಕೈಯಲ್ಲಿ ಚಾಕು ಹಿಡಿದು ಬಂದು ರಾಹುಲ್ ಮೇಲೆ ದಾಳಿ ನಡೆಸಿದ್ದಾನೆ. ರಾಹುಲ್ ತಲೆ, ಎದೆ ಹಾಗೂ ಕೈ ಭಾಗಗಳಿಗೆ ಚಾಕುವಿನಿಂದ ಇರಿದ ಪರಿಣಾಮ ಗಂಭೀರ ಗಾಯಗೊಂಡಿದ್ದರು.
ಗಾಯಗೊಂಡ ರಾಹುಲ್ ನನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಮೃತನ ಸಹೋದರ ರೋಹಿತ್ 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ರಾಜಗೋಪಾಲ ನಗರ ಪೊಲೀಸ್ ಠಾಣೆ ಪೊಲೀಸರು ಆರೋಪಿಗಾಗಿ ಶೋಧ ನಡೆಸಿ, ಹನುಮಂತಪ್ಪ @ ಅಜಯ್‌ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಮಿತಿಮೀರಿದ ಪುಂಡರ ಹಾವಳಿ.. ಕಾರಿನ ಸನ್‌ರೂಫ್ ಓಪನ್ ಮಾಡಿ ಎಣ್ಣೆ ಹೊಡೆದ ಭೂಪ!


















