ಗುರುಗ್ರಾಮ : ಇನ್ಮುಂದೆ ನೀವು ಅಡುಗೆ ಅನಿಲ ಸಿಲಿಂಡರ್‌ಗಾಗಿ ಗ್ಯಾಸ್ ಏಜೆನ್ಸಿಗಳ ಮುಂದೆ ಸರತಿ ಸಾಲಲ್ಲಿ ನಿಂತು ಕಾಯಬೇಕಾಗಿಲ್ಲ. ಬ್ಯಾಂಕ್ ಎಟಿಎಂನಿಂದ ಹೇಗೆ ಸುಲಭವಾಗಿ ಹಣ ಡ್ರಾ ಮಾಡುತ್ತೀರೋ, ಅಷ್ಟೇ ಸುಲಭವಾಗಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯಬಹುದು. ಹೌದು.. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ದೇಶದಲ್ಲೇ ಮೊದಲ ಬಾರಿಗೆ ‘ಎಲ್‌ಪಿಜಿ ಎಟಿಎಂ’ ಎಂಬ ವಿನೂತನ ಯೋಜನೆಯನ್ನು ಗುರುಗ್ರಾಮದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. ಇದರಿಂದಾಗಿ ಗ್ರಾಹಕರು ಗ್ಯಾಸ್ ಏಜೆನ್ಸಿಗಳ ಮುಂದೆ ಕಾಯುವ ಅಥವಾ ಸಿಲಿಂಡರ್ ಡೆಲಿವರಿಗಾಗಿ ದಿನಗಟ್ಟಲೆ ಕಾಯುವ ಅಗತ್ಯವೇ ಇರುವುದಿಲ್ಲ.
ಮೂರೇ ನಿಮಿಷದಲ್ಲಿ ಕೈ ಸೇರಲಿದೆ ಸಿಲಿಂಡರ್
ಗುರುಗ್ರಾಮದ ಸೆಕ್ಟರ್ 33ರ ಸೋಹ್ನಾ ಪ್ರದೇಶದಲ್ಲಿರುವ ‘ಸೆಂಟ್ರಲ್ ಪಾರ್ಕ್ ಫ್ಲವರ್ ವ್ಯಾಲಿ’ ಎಂಬ ವಸತಿ ಸಮುಚ್ಚಯದಲ್ಲಿ ಈ ಎಲ್‌ಪಿಜಿ ವೆಂಡಿಂಗ್ ಮೆಷಿನ್ ಅನ್ನು ಅಳವಡಿಸಲಾಗಿದೆ. ಇದು ಸಂಪೂರ್ಣ ಡಿಜಿಟಲ್ ಆಗಿ ಕಾರ್ಯನಿರ್ವಹಿಸುತ್ತದೆ. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಒಟಿಪಿ (OTP) ಮೂಲಕ ದೃಢೀಕರಿಸಬೇಕು. ನಂತರ ಖಾಲಿ ಸಿಲಿಂಡರ್ ಅನ್ನು ಯಂತ್ರಕ್ಕೆ ಒಪ್ಪಿಸಿ, ಆನ್‌ಲೈನ್ ಮೂಲಕ ಹಣ ಪಾವತಿಸಿದರೆ ಸಾಕು; ಕೇವಲ ಎರಡರಿಂದ ಮೂರು ನಿಮಿಷಗಳಲ್ಲಿ ಭರ್ತಿಯಾದ ಹೊಸ ಸಿಲಿಂಡರ್ ಯಂತ್ರದ ಕೆಳಭಾಗದ ಕಂಪಾರ್ಟ್‌ಮೆಂಟ್‌ನಿಂದ ಹೊರಬರುತ್ತದೆ.
ಹಗುರ ಮತ್ತು ಸುರಕ್ಷಿತ ‘ಕಾಂಪೋಸಿಟ್’ ಸಿಲಿಂಡರ್‌ಗಳು
ಸದ್ಯಕ್ಕೆ ಈ ಎಟಿಎಂ ಮೂಲಕ 10 ಕೆಜಿ ತೂಕದ ‘ಕಾಂಪೋಸಿಟ್’ ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದೆ. ಇವು ಸಾಂಪ್ರದಾಯಿಕ ಕಬ್ಬಿಣದ ಸಿಲಿಂಡರ್‌ಗಳಿಗಿಂತ ಶೇ.50ರಷ್ಟು ಕಡಿಮೆ ತೂಕ ಹೊಂದಿದ್ದು, ಫೈಬರ್‌ನಿಂದ ಮಾಡಲ್ಪಟ್ಟಿವೆ. ಇದರಿಂದಾಗಿ ಹಿರಿಯ ನಾಗರಿಕರು ಮತ್ತು ಮಹಿಳೆಯರು ಇದನ್ನು ಸುಲಭವಾಗಿ ಒಯ್ಯಬಹುದು. ಈ ಯಂತ್ರದಲ್ಲಿ ಸ್ಮಾರ್ಟ್ ಸೆನ್ಸಾರ್‌ಗಳನ್ನು ಅಳವಡಿಸಲಾಗಿದ್ದು, ಸಿಲಿಂಡರ್‌ಗಳ ದಾಸ್ತಾನು ಕಡಿಮೆ ಆದ ತಕ್ಷಣ ಹತ್ತಿರದ ಗ್ಯಾಸ್ ಏಜೆನ್ಸಿಗೆ ಸ್ವಯಂಚಾಲಿತವಾಗಿ ಸಂದೇಶ ರವಾನೆಯಾಗುತ್ತದೆ. ಇದರಿಂದಾಗಿ ಸ್ಟಾಕ್ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ.
ಯುದ್ಧದ ಭೀತಿಯ ನಡುವೆ ಭರವಸೆಯ ಬೆಳಕು
ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಜಾಗತಿಕವಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯದ ಆತಂಕದ ನಡುವೆಯೇ ಈ ಎಲ್‌ಪಿಜಿ ಎಟಿಎಂ ಭರವಸೆ ಮೂಡಿಸಿದೆ. ದೇಶದಲ್ಲಿ ಅಡುಗೆ ಅನಿಲದ ದಾಸ್ತಾನು ಸಮರ್ಪಕವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ, ಜನರು ಆತಂಕದಿಂದ ಮುಗಿಬಿದ್ದು ಸಿಲಿಂಡರ್ ಖರೀದಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಮುಂಗಡ ಬುಕಿಂಗ್ ಇಲ್ಲದೆ, ದಿನದ 24 ಗಂಟೆಯೂ ಸಿಲಿಂಡರ್ ದೊರೆಯುವ ಈ ವ್ಯವಸ್ಥೆ ಜನರಿಗೆ ನಿರಾಳತೆ ತಂದಿದೆ.
ಮುಂದಿನ ದಿನಗಳಲ್ಲಿ ವಿಸ್ತರಣೆ ಸಾಧ್ಯತೆ
ಪ್ರಾಯೋಗಿಕವಾಗಿ ಆರಂಭವಾಗಿರುವ ಈ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಜಾ ದಿನಗಳಲ್ಲಿ ಅಥವಾ ತಡರಾತ್ರಿಯಲ್ಲೂ ಸಿಲಿಂಡರ್ ಪಡೆಯಲು ಸಾಧ್ಯವಿರುವುದು ಇದರ ದೊಡ್ಡ ಪ್ಲಸ್ ಪಾಯಿಂಟ್. ಈ ಪ್ರಯೋಗ ಯಶಸ್ವಿಯಾದಲ್ಲಿ, ಮುಂದಿನ ದಿನಗಳಲ್ಲಿ ದೇಶದ ಇತರೆ ಪ್ರಮುಖ ನಗರಗಳ ವಸತಿ ಪ್ರದೇಶಗಳಲ್ಲೂ ಇಂತಹ ‘ಗ್ಯಾಸ್ ಎಟಿಎಂ’ಗಳನ್ನು ಕಾಣಬಹುದಾಗಿದೆ.
ಇದನ್ನೂ ಓದಿ : ರಾಷ್ಟ್ರೀಯ ಆರೋಗ್ಯ ಮಿಷನ್‌ನಲ್ಲಿ 13 ಹುದ್ದೆಗಳು ಖಾಲಿ.. ನೇರ ಸಂದರ್ಶನದ ಮೂಲಕ ನೇಮಕಾತಿ!



















