ನವದೆಹಲಿ : ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಖಾಯಂ ಕಮಿಷನ್ (Permanent Commission) ನಿರಾಕರಣೆಯು ವ್ಯವಸ್ಥಿತ ತಾರತಮ್ಯದ ಪ್ರತಿಬಿಂಬ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. “ಪರಿಪೂರ್ಣ ನ್ಯಾಯ” ಒದಗಿಸುವ ನಿಟ್ಟಿನಲ್ಲಿ ಸಂವಿಧಾನದ 142ನೇ ವಿಧಿಯನ್ನು ಬಳಸಿಕೊಂಡ ನ್ಯಾಯಾಲಯ, ಸೇನೆಯಲ್ಲಿನ ಉದ್ಯೋಗಾವಕಾಶಗಳು ಕೇವಲ ಪುರುಷರಿಗಷ್ಟೇ ಮೀಸಲಾಗಿವೆ ಎಂದು ಭಾವಿಸುವುದು ತಪ್ಪು ಎಂದೂ ಪ್ರತಿಪಾದಿಸಿದೆ.
14 ವರ್ಷಗಳ ಸೇವೆಯ ನಂತರ ಬಿಡುಗಡೆ ಹೊಂದಿದ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಶಾರ್ಟ್ ಸರ್ವಿಸ್ ಕಮಿಷನ್ (SSC) ಮಹಿಳಾ ಅಧಿಕಾರಿಗಳಿಗೆ ನಿವೃತ್ತಿ ವೇತನದ (Pension) ಪ್ರಯೋಜನಗಳನ್ನು ನೀಡಬೇಕು ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಸ್ತುತ ಸೇವೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಅವರ ಶ್ರೇಣಿ, ವೈದ್ಯಕೀಯ ಮಾನದಂಡ ಮತ್ತು ಶಿಸ್ತಿನ ಆಧಾರದ ಮೇಲೆ ಖಾಯಂ ಕಮಿಷನ್ ಪಡೆಯುವ ಹಕ್ಕಿದೆ ಎಂದು ಸ್ಪಷ್ಟಪಡಿಸಿದೆ.
ವಿಂಗ್ ಕಮಾಂಡರ್ ಸುಚೇತಾ ಎಡನ್ ಸೇರಿದಂತೆ ಭಾರತೀಯ ವಾಯುಪಡೆಯ ಹಲವು ಮಹಿಳಾ ಅಧಿಕಾರಿಗಳು 2019ರ ನೀತಿ ಬದಲಾವಣೆಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.
ವ್ಯವಸ್ಥಿತ ತಾರತಮ್ಯದ ವಿರುದ್ಧ ಚಾಟಿ
ಮಹಿಳಾ ಅಧಿಕಾರಿಗಳ ವಾರ್ಷಿಕ ವರದಿಗಳನ್ನು (ACR) ಸಿದ್ಧಪಡಿಸುವಾಗ, ಅವರು ದೀರ್ಘಕಾಲದ ವೃತ್ತಿಜೀವನವನ್ನು ಹೊಂದಿರುವುದಿಲ್ಲ ಎಂಬ ಪೂರ್ವಗ್ರಹ ಪೀಡಿತ ಮನಸ್ಥಿತಿಯಿಂದ ಮೌಲ್ಯಮಾಪನ ಮಾಡಲಾಗುತ್ತಿತ್ತು ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಆರಂಭದಲ್ಲಿ ಮಹಿಳೆಯರು ಖಾಯಂ ಕಮಿಷನ್‌ಗೆ ಅನರ್ಹರಾಗಿದ್ದ ಕಾರಣ, ಪುರುಷರಿಗೆ ನೀಡಲಾಗುವಂತಹ ಪ್ರಮುಖ ಹುದ್ದೆಗಳು ಅಥವಾ ವೃತ್ತಿಜೀವನವನ್ನು ಸುಧಾರಿಸುವ ತರಬೇತಿ ಕೋರ್ಸ್‌ಗಳನ್ನು ಅವರಿಗೆ ನೀಡಲಾಗಿರಲಿಲ್ಲ. ಇದು ಅಂತಿಮವಾಗಿ ಅವರ ಅರ್ಹತೆಯ ಅಂಕಗಳು ಕಡಿಮೆ ಆಗಲು ಕಾರಣವಾಗಿತ್ತು ಎಂದು ನ್ಯಾಯಾಲಯ ವಿಶ್ಲೇಷಿಸಿದೆ.
ಪಾರದರ್ಶಕತೆಗೆ ಹೊಸ ನಿಯಮ
ಭವಿಷ್ಯದಲ್ಲಿ ಇಂತಹ ತಾರತಮ್ಯಗಳು ಮರುಕಳಿಸದಂತೆ ತಡೆಯಲು ಸುಪ್ರೀಂ ಕೋರ್ಟ್ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇನ್ನು ಮುಂದೆ ಯಾವುದೇ ಆಯ್ಕೆ ಮಂಡಳಿ (Selection Board) ಪ್ರಕ್ರಿಯೆ ಆರಂಭವಾಗುವ ಮೊದಲು, ಆಯಾ ವಿಭಾಗಗಳಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳ ಸಂಖ್ಯೆ, ಮೌಲ್ಯಮಾಪನದ ಮಾನದಂಡಗಳು ಮತ್ತು ಪ್ರತಿ ವಿಭಾಗಕ್ಕೆ ನಿಗದಿಪಡಿಸಿದ ಅಂಕಗಳ ವಿವರಗಳನ್ನು ಒಳಗೊಂಡ ಸಾಮಾನ್ಯ ಸುತ್ತೋಲೆಯನ್ನು ಹೊರಡಿಸುವುದು ಕಡ್ಡಾಯವಾಗಿದೆ. ಈ ಕ್ರಮವು ಸಶಸ್ತ್ರ ಪಡೆಗಳಲ್ಲಿನ ವೃತ್ತಿಜೀವನದ ಪ್ರಗತಿಯು ಯಾವುದೇ ಗುಪ್ತ ಅಥವಾ ವ್ಯಕ್ತಿನಿಷ್ಠ ತೀರ್ಮಾನಗಳ ಬದಲಿಗೆ ಪಾರದರ್ಶಕ ಮತ್ತು ನ್ಯಾಯಯುತ ಪ್ರಕ್ರಿಯೆಯ ಮೂಲಕ ನಡೆಯುವುದನ್ನು ಖಚಿತಪಡಿಸಲಿದೆ.
ಇದನ್ನೂ ಓದಿ : ಪ್ರವಾಸಿಗರ ಜೀವದ ಜೊತೆ ಖಾಸಗಿ ಬಸ್ ಸಿಬ್ಬಂದಿಗಳ ಚೆಲ್ಲಾಟ : ಸ್ಥಳೀಯರ ಆಕ್ರೋಶ



















