ಬೆಂಗಳೂರು: ಫ್ರೀಡಂ ಪಾರ್ಕ್‌ನಲ್ಲಿ ಒಳಮೀಸಲಾತಿ ವಿಚಾರವಾಗಿ ನಡೆಯಲಿರುವ ಭಾರೀ ಪ್ರತಿಭಟನೆ ಹಿನ್ನೆಲೆ, ಬೆಂಗಳೂರಿನ ಪಶ್ಚಿಮ ಹಾಗೂ ಕೇಂದ್ರ ವಿಭಾಗಗಳ ಕೆಲ ಭಾಗಗಳಲ್ಲಿ ಇಂದು ಮತ್ತು ನಾಳೆ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ವತಿಯಿಂದ ಈ ಪ್ರತಿಭಟನೆ ಆಯೋಜನೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಪ್ರತಿಭಟನೆ ವೇಳೆ ಮದ್ಯದ ಅಮಲಿನಲ್ಲಿ ಕೆಲ ಕಿಡಿಗೇಡಿಗಳು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆ ಇರುವುದರಿಂದ, ಬಾರ್‌ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.
ಎಲ್ಲೆಲ್ಲಿ ಬಾರ್&ರೆಸ್ಟೋರೆಂಟ್ ಬಂದ್?
ಪಶ್ಚಿಮ ವಿಭಾಗದ ಉಪ್ಪಾರಪೇಟೆ, ಸಿಟಿ ಮಾರ್ಕೆಟ್, ಕಾಟನ್‌ಪೇಟೆ, ಕಲಾಸಿಪಾಳ್ಯ ಹಾಗೂ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾರ್‌ಗಳನ್ನು ಬಂದ್ ಮಾಡಲಾಗುತ್ತದೆ. ಅದೇ ರೀತಿ ಕೇಂದ್ರ ವಿಭಾಗದ ಶೇಷಾದ್ರಿಪುರಂ, ಹೈಗ್ರೌಂಡ್ ಮತ್ತು ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಬಾರ್ & ರೆಸ್ಟೋರೆಂಟ್‌ಗಳಿಗೆ ಬಂದ್ ಅನ್ವಯಿಸುತ್ತದೆ.
ನಗರದ ಸಾರ್ವಜನಿಕರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಹಕರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.



















