ಟೆಹ್ರಾನ್ : ನಮ್ಮ ಎಚ್ಚರಿಕೆಗೆ ಬೆದರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ್ದಾರೆಂದು ಇರಾನ್ ತಿರುಗೇಟು ಕೊಟ್ಟಿದೆ. ಡೊನಾಲ್ಡ್ ಟ್ರಂಪ್ 5 ದಿನ ಕದನ ವಿರಾಮ ಘೋಷಿಸಿದ್ದಕ್ಕೆ ಇರಾನ್ ರಾಯಭಾರ ಕಚೇರಿ ತಿರುಗೇಟು ನೀಡಿದೆ.
ಅಪ್ಘಾನಿಸ್ತಾನದಲ್ಲಿರುವ ಇರಾನ್ ರಾಯಭಾರ ಕಚೇರಿಯಿಂದ ಈ ರೀತಿ ಪೋಸ್ಟ್ ಮಾಡಿ ವ್ಯಂಗ್ಯವಾಡಲಾಗಿದೆ. ಅಮೆರಿಕವು ಇರಾನಿನ ಇಂಧನ ಮೂಲಸೌಕರ್ಯದ ಮೇಲೆ ದಾಳಿ ಮಾಡುವುದಾಗಿ ಬೆದರಿಸಿದೆ. ಒಂದು ವೇಳೆ ಅಮೆರಿಕ ತಾನು ಹೇಳಿದಂತೆ ನಮ್ಮ ಮೂಲಸೌಕರ್ಯದ ಮೇಲೆ ದಾಳಿ ಮಾಡಿದರೆ ಜಗತ್ತಿನ ಇನ್ನಿತರ ಪ್ರದೇಶಗಳ ಮೂಲ ಸೌಕರ್ಯದ ಮೇಲೆ ನಾವು ದಾಳಿ ನಡೆಸುತ್ತೇವೆ. ಹೀಗಾಗಿಯೇ ಟ್ರಂಪ್ ದಾಳಿಯಿಂದ ಹಿಂದೆ ಸರಿದಿದ್ದಾರೆ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ, ನಾವು ಯಾವುದೇ ಶಾಂತಿ ಮಾತುಕತೆ ನಡೆಸಿಲ್ಲ. ನಿಮ್ಮ ಮೇಲಿನ ದಾಳಿ ನಿಲ್ಲಬೇಕಾದರೆ ಅಮೆರಿಕದ ಜೊತೆ ಮಾತನಾಡಿ ಎಂದು ನಾವು ಮಧ್ಯಪ್ರಾಚ್ಯ ದೇಶಗಳಿಗೆ ಹೇಳಿದ್ದೇವೆ ಅಷ್ಟೇ ಎಂದು ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಗೆ 48 ಗಂಟೆಗಳ ಎಚ್ಚರಿಕೆ ನೀಡಿದ್ದರು. 48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ (Hormuz Strait) ತೆರೆಯದಿದ್ದರೆ ನಿಮ್ಮ ವಿದ್ಯುತ್ ಸ್ಥಾವರ ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಇರಾನ್ ಬೆದರಿಕೆಗೆ ಜಗ್ಗದೆ ಅಷ್ಟೇ ತೀಕ್ಷ್ಣವಾಗಿಯೇ ತಿರುಗೇಟು ಕೊಟ್ಟಿತ್ತು. ಹೀಗಾಗಿ ದೊಡ್ಡ ಪ್ರಮಾಣದ ದಾಳಿ ನಡೆಯಬಹುದು ಎಂದು ಊಹಿಸುತ್ತಿದ್ದಾಗಲೇ ಟ್ರಂಪ್ 5 ದಿನದ ಕದನ ವಿರಾಮ ಘೋಷಣೆ ಮಾಡಿದ್ದಾರೆ. ಹೀಗಾಗಿ ಇರಾನ್ ವ್ಯಂಗ್ಯವಾಡಲು ಆರಂಭಿಸಿದೆ.
ಫಲಪ್ರದವಾದ ಮಾತುಕತೆ ನಡೆದ ಹಿನ್ನೆಲೆಯಲ್ಲಿ ಇರಾನಿನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ಎಲ್ಲಾ ಮಿಲಿಟರಿ ದಾಳಿಗಳನ್ನು ಐದು ದಿನಗಳ ಅವಧಿಗೆ ಮುಂದೂಡಲು ಸೂಚನೆ ನೀಡಿದ್ದೇನೆ ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಬೆಣ್ಣೆಯಲ್ಲಿ ಕೂದಲು : ‘ಕೈ’ ಕೋಟೆಯಲ್ಲಿ ಮುಸ್ಲಿಂ ಕೆಂಡ!


















