ಬೆಂಗಳೂರು : ಮೂಡುಬಿದರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಅವರ ಮೇಲಿರುವ, ಸಂತ್ರಸ್ತ ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಸಂತ್ರಸ್ತ ಮಹಿಳೆಯರು ಇಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರೊಂದಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಸಂತ್ರಸ್ತೆಯರ ಅಹವಾಲು ಆಲಿಸಿದ ಗೃಹ ಸಚಿವರು, ಪ್ರಕರಣದ ಗಂಭೀರತೆ ಪರಿಗಣಿಸಿ ತಕ್ಷಣವೇ ತನಿಖೆಯನ್ನು ಸಿಐಡಿಗೆ ವಹಿಸುವಂತೆ ಆದೇಶಿಸಿದ್ದಾರೆ.
ಗೃಹ ಸಚಿವರ ನಿವಾಸದಲ್ಲಿ ನಡೆದ ಈ ಭೇಟಿಯಲ್ಲಿ ಸಂತ್ರಸ್ತೆಯರು ತಮಗಾದ ಅನ್ಯಾಯ ಮತ್ತು ಘಟನೆಯ ಪೂರ್ಣ ಮಾಹಿತಿಯನ್ನು ಸಾಕ್ಷಿ ಸಮೇತ ವಿವರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, ‘ಮೂಡುಬಿದರೆ ಘಟನೆಯ ಕುರಿತು ಇಂದು ಕೆಲವು ಸಂತ್ರಸ್ತೆಯರು ನನ್ನನ್ನು ಭೇಟಿ ಮಾಡಿ ನೀಡಿದ ಮಾಹಿತಿ ಮತ್ತು ಘಟನೆಗಳ ಆಧಾರದ ಮೇಲೆ ಸತ್ಯಾಸತ್ಯತೆ ಹೊರಬರಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಡಿಜಿ-ಐಜಿಪಿ ಅವರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಈಗಾಗಲೇ ಈ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಸಂಬಂಧಪಟ್ಟ ಇನ್ಸ್ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ. ‘ತನಿಖೆಯ ವರದಿಯನ್ನು ತುರ್ತಾಗಿ ನೀಡುವಂತೆ ಸೂಚಿಸಿದ್ದೇವೆ. ಈ ಕೃತ್ಯದಲ್ಲಿ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದು ಸಿಐಡಿ ತನಿಖೆಯಿಂದ ಸಂಪೂರ್ಣವಾಗಿ ಹೊರಬರಲಿದೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಡಿಜಿಟಲ್ ಅರೆಸ್ಟ್.. 5 ಕೋಟಿ ಹಣ ಕಳೆದುಕೊಂಡ ನಿವೃತ್ತ ಸಂಶೋಧಕ


















