ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಪತಿಯು ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಶಿವಕ್ಕ ಜೋಡಳ್ಳಿ (33) ಕೊಲೆಯಾದ ಪತ್ನಿ. ಪತಿ ಬಸವರಾಜ ಜೋಡಳ್ಳಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಯಿಗೆ ಬೈದಿದ್ದ ವಿಚಾರ ಹಾಗೂ ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿದ್ದ ಹಿನ್ನೆಲೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ಮೊದಲ ಗಂಡನ ಮರಣದ ಬಳಿಕ ಶಿವಕ್ಕ ಮತ್ತು ಬಸವರಾಜ 15 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು. ಆದರೆ, ಗಂಡನ ಕಿರುಕುಳಕ್ಕೆ ಬೇಸತ್ತು ಶಿವಕ್ಕ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ಮಠವೊಂದರಲ್ಲಿ ವಾಸವಾಗುತ್ತಿದ್ದರು.
ಘಟನೆಯ ದಿನ ಬೆಳಗ್ಗೆ ಸುಮಾರು 7:30ರ ಸುಮಾರಿಗೆ ಶಿವಕ್ಕ ಮಲಗಿದ್ದ ವೇಳೆ ಬಸವರಾಜ ಆಕೆಯನ್ನು ಎಳೆದೊಯ್ದು ನಡುರಸ್ತೆಗೆ ಕರೆದುಕೊಂಡು ಹೋಗಿದ್ದಾನೆ. ಮೊದಲು ಹಲ್ಲೆ ನಡೆಸಿ, ಬಳಿಕ ಚಾಕುವಿನಿಂದ ಇರಿದು, ನಂತರ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು ಇದ್ದಾರೆ ಎನ್ನಲಾಗಿದೆ. ಹೆಣ್ಣು ಮಗಳು ಸದ್ಯ ತಾಯಿಯ ಸಹೋದರರ ಬಳಿ ಇರುವುದಾಗಿ ತಿಳಿದಿದೆ. ಪತಿ ಬಸವರಾಜ ವೃತ್ತಿಯಲ್ಲಿ ಡ್ರೈವರ್ ಆಗಿದ್ದು, ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು . ಕಳೆದ ಕೆಲವು ವರ್ಷಗಳಿಂದ ಇಬ್ಬರೂ ಬೇರೆಬೇರೆ ವಾಸವಾಗುತ್ತಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : 786 ನಂಬರನ್ನೇ ವಂಚನೆಗೆ ಬಳಸಿಕೊಂಡ ಸೈಬರ್ ಚೋರರು



















