ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಮತ್ತೆ ಕಸದ ಸಮಸ್ಯೆ ತಲೆದೋರಲಿದೆಯೇ ಎಂಬ ಆತಂಕ ಮೂಡಿದೆ. ಇಂದಿನಿಂದ ನಗರದ ಕೆಲವು ಪ್ರದೇಶಗಳಲ್ಲಿ ಕಸದ ಆಟೋ ಚಾಲಕರು ಸಾಂಕೇತಿಕವಾಗಿ ಕಸ ವಿಲೇವಾರಿ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ.
ಕಸದ ವಿಂಗಡಣೆ ವಿಚಾರವೇ ಈ ವಿವಾದಕ್ಕೆ ಮೂಲ ಕಾರಣವಾಗಿದೆ. ಮನೆಮನೆಗಳಲ್ಲಿ ಕಸವನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ನೀಡಬೇಕು ಎಂದು ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ನಾಗರಿಕರು ಸರಿಯಾದ ರೀತಿಯಲ್ಲಿ ಕಸ ವಿಂಗಡಣೆ ಮಾಡದೇ ಇರುವುದರಿಂದ ಅದರ ಹೊರೆ ಪೌರ ಕಾರ್ಮಿಕರ ಮೇಲೇ ಬೀಳುತ್ತಿದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಸ ವಿಂಗಡಿಸುವ ವೇಳೆ ಹರಿತವಾದ ವಸ್ತುಗಳಿಂದ ಕೈಗಳಿಗೆ ಗಾಯವಾಗುತ್ತಿರುವುದು, ದಿನಕ್ಕೆ ಸುಮಾರು ಐದು ಗಂಟೆಗಳ ಕಾಲ ಈ ಕೆಲಸ ಮಾಡಬೇಕಾಗುತ್ತಿರುವುದು ಕಾರ್ಮಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ತಿಳಿಸಿದ್ದಾರೆ. ಚರ್ಮ ರೋಗಗಳು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿದ್ದಾರೆ.
ಜನರು ಕಸವನ್ನು ಸರಿಯಾಗಿ ವಿಂಗಡಣೆ ಮಾಡಿಕೊಡದೇ ಇರುವುದರಿಂದ ಸಮಸ್ಯೆ ಹೆಚ್ಚುತ್ತಿದೆ. ಪೌರ ಕಾರ್ಮಿಕರೇ ಕಸ ವಿಂಗಡಣೆ ಮಾಡಬೇಕು ಎಂದು ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಕಸದ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಲವು ಭಾಗಗಳಲ್ಲಿ ಕಸ ವಿಲೇವಾರಿ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ತಿಳಿಸಿರುವ ಅವರು, ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕಸ ವಿಲೇವಾರಿ ನಿಲ್ಲಿಸುವ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ರಾಜ್ಯದ ಜನತೆಗೆ ಗುಡ್ ನ್ಯೂಸ್ – ಕೇಂದ್ರದಿಂದ ಪ್ರತಿನಿತ್ಯ 10 ಸಾವಿರ ಸಿಲಿಂಡರ್ ಪೂರೈಕೆ!



















