ನವದೆಹಲಿ : ಮಧ್ಯಪ್ರಾಚ್ಯದ ಘೋರ ಕದನ ಬರೋಬ್ಬರಿ 22ನೇ ದಿನಕ್ಕೆ ಕಾಲಿಟ್ಟಿದ್ದು, ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಸಮರ ಮತ್ತಷ್ಟು ತೀವ್ರಗೊಂಡಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಇಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಜತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ರಂಜಾನ್ ಶುಭಾಶಯ ತಿಳಿಸಿದ ಮೋದಿ, ಸಂಘರ್ಷದ ಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ.
“ಇರಾನ್ ಅಧ್ಯಕ್ಷ ಡಾ. ಮಸೂದ್ ಪೆಜೆಶ್ಕಿಯನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಈದ್ ಮತ್ತು ನೌರುಜ್ ಶುಭಾಶಯಗಳನ್ನು ತಿಳಿಸಿದ್ದೇನೆ. ಈ ಹಬ್ಬದ ಋತುವು ಪಶ್ಚಿಮ ಏಷ್ಯಾಕ್ಕೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ತರಲಿದೆ ಎಂದು ನಾವು ಆಶಿಸುತ್ತೇವೆ” ಎಂದು ಮೋದಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನು, ಪಶ್ಚಿಮ ಏಷ್ಯಾದ ನಿರ್ಣಾಯಕ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ದಾಳಿಗಳು ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ ಹಾಕುವುದಲ್ಲದೆ, ಜಾಗತಿಕ ಪೂರೈಕೆ ಸರಪಳಿಗಳನ್ನ ತೀವ್ರವಾಗಿ ಅಡ್ಡಿಪಡಿಸುತ್ತವೆ, ಇದು ಜಾಗತಿಕ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಮತ್ತೊಂದು ಪ್ರಮುಖ ವಿಷಯದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ನೌಕಾಯಾನ ಸ್ವಾತಂತ್ರ್ಯವನ್ನ ರಕ್ಷಿಸುವ ಅಗತ್ಯವನ್ನ ಒತ್ತಿ ಹೇಳಿದರು. ಅಂತಾರಾಷ್ಟ್ರೀಯ ಸಮುದ್ರ ಮಾರ್ಗಗಳು ಮುಕ್ತವಾಗಿ ಮತ್ತು ಸಂಪೂರ್ಣವಾಗಿ ಸುರಕ್ಷಿತವಾಗಿರುವುದನ್ನ ಖಚಿತಪಡಿಸಿಕೊಳ್ಳುವುದು ಮತ್ತು ವ್ಯಾಪಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ. ಅಲ್ಲದೇ ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಇರಾನ್‌ನ ನಿರಂತರ ಬೆಂಬಲವನ್ನ ಶ್ಲಾಘಿಸಿದೆ ಎಂದು ಕೂಡ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 28ರಂದು ಯುದ್ಧ ಆರಂಭವಾದ ಬಳಿಕ ನರೇಂದ್ರ ಮೋದಿ ಮತ್ತು ಡಾ. ಮಸೂದ್ ಪೆಜೆಶ್ಕಿಯನ್ ಮಾತನಾಡುತ್ತಿರುವುದು ಇದು 2ನೇ ಬಾರಿ ಈ ತಿಂಗಳ ಆರಂಭದಲ್ಲಿ ಈ ಇಬ್ಬರು ನಾಯಕರು ಮಾತುಕತೆ ನಡೆಸಿದ್ದರು. ಈ ವೇಳೆ ಪಶ್ಚಿಮ ಏಷ್ಯಾದಲ್ಲಿನ ಗಂಭೀರ ಪರಿಸ್ಥಿತಿ ಕುರಿತು ಚರ್ಚಿಸಿದ್ದಾಗಿ ಮೋದಿ ಹೇಳಿದ್ದರು. ಉದ್ವಿಗ್ನ ಪರಿಸ್ಥಿತಿ, ನಾಗರಿಕರ ಜೀವಹಾನಿ ಹಾಗೂ ಮೂಲಸೌಕರ್ಯಕ್ಕೆ ಹಾನಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಜತೆಗೆ ಭಾರತೀಯ ಸುರಕ್ಷತೆ ಬಗ್ಗೆಯೂ ಮೋದಿ ಧ್ವನಿಗೂಡಿಸಿದ್ದರು.
ಇದನ್ನೂ ಓದಿ : ಚಿಕ್ಕಮಗಳೂರು | ವಿದ್ಯಾರ್ಥಿಗಳಿಗೆ ಮನಸೋ ಇಚ್ಛೆ ಥಳಿಸಿದ ಪ್ರಿನ್ಸಿಪಾಲ್!



















