ಮಂಗಳೂರು: ತೆಂಕುತ್ತಿಟ್ಟು ಯಕ್ಷಗಾನ ಶೈಲಿಯ ಅಪ್ರತಿಮ ಕಲಾತಪಸ್ವಿ, ರಂಗಸ್ಥಳದ ಮೇರು ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ ಅವರು 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ನಾಟ್ಯ ಗುರು, ದಶವತಾರಿ ಎಂದೇ ಜನಪ್ರಿಯರಾಗಿದ್ದ ಸೂರಿಕುಮೇರು ಕೆ. ಗೋವಿಂದ ಭಟ್ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಸೂರಿಕುಮೇರು ಕೆ. ಗೋವಿಂದ ಭಟ್ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದರು. ಕೆಲವು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ಅವರು ಬಳಿಕ ಶಿವಮೊಗ್ಗದಲ್ಲಿರೋ ಹಿರಿಯ ಮಗನ ಮನೆಯಲ್ಲಿದ್ದರು. ಮಾರ್ಚ್ 20ರ ರಾತ್ರಿ 9.30ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಗೋವಿಂದ ಭಟ್ ಕಲಾ ಪಯಣ
ಯಕ್ಷಗಾನ ಹೆಜ್ಜೆಗಾರಿಕೆ, ಮಾತುಗಾರಿಕೆಯಲ್ಲಿ ಜನರನ್ನ ಸೆಳೆಯುತ್ತಿದ್ದ ಗೋವಿಂದ ಭಟ್ಟರು ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಸದಾ ಸಿದ್ಧಹಸ್ತರಾಗಿದ್ರು. 1940ರ ಮಾರ್ಚ್ 22ರಂದು ಬಂಟ್ವಾಳದ ಕೋಡಪದವಿನ ಕಡು ಬಡತನದ ಕುಟುಂಬದಲ್ಲಿ ಜನಸಿದ ಗೋವಿಂದ ಭಟ್ಟರು, ಬಡತನವನ್ನ ಮೆಟ್ಟಿ ನಿಂತು ಸಾಧನೆಗೈದಿದ್ದಾರೆ.
1951ರಲ್ಲಿ ಬಾಲಗೋಪಾಲ ವೇಷದ ಮೂಲಕ ಧರ್ಮಸ್ಥಳ ಮೇಳದಲ್ಲಿ ಆರಂಭವಾದ ಅವರ ಕಲಾ ಪಯಣ, ಯಕ್ಷಗಾನದ ಇತಿಹಾಸದಲ್ಲಿ ಒಂದು ದಾಖಲೆಯಾಗಲಿ ಉಳಿಯುವಂಥದ್ದು, ಇಳಿ ವಯಸ್ಸಿನಲ್ಲೂ ಇವರು ರಂಗಭೂಮಿಯ ಮೇಲಿನ ಮೋಹ ಬಿಟ್ಟವರಲ್ಲ. ಕಣ್ಣಿನ ದೃಷ್ಟಿಯೇ ಮಂಜಾಗುತ್ತಿದ್ದರೂ, ಶರೀರ ದಣಿಯುತ್ತಿದ್ದರೂ ರಂಗಸ್ಥಳ ಬಿಟ್ಟು ನನಗೇನು ಗತಿ?” ಎಂದು ಕೇಳುತ್ತಿದ್ದ ಕಲಾತಪಸ್ವಿ ಅವರು.
ಮಣಿಮೇಖನೆ, ಕಾವೇರಿ ಮಹಾತ್ಮ, ಮೂರುವರೆ ವಜ್ರಗಳು, ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ, ನಹುಷೇಂದ್ರ ಪ್ರಸಂಗಗಳನ್ನು ಅವರು ರಚಿಸಿದ್ದಾರೆ. ಗೋವಿಂದ ಭಟ್ ಅವರು ವಿಶೇಷವಾಗಿ ರಕ್ತಬೀಜ, ಇಂದ್ರಜಿತ್, ಭೀಷ್ಮ, ಕೌರವ ಮುಂತಾದ ನಾನಾ ಪಾತ್ರಗಳ ಮೂಲಕ ಮನೆಮಾತಾಗಿದ್ದಾರೆ. ಕುಮಾರಯ್ಯ ಹೆಗ್ಗಡೆ, ಋುತುಪರ್ಣ, ಕೌರವ ಪಾತ್ರ ಪ್ರಸಿದ್ದ. ವಾಕ್ಯರೂಪದಲ್ಲಿ ಸ್ಪಷ್ಟವಾಗಿ ಅರ್ಥ ಹೇಳುವ ಭಟ್ಟರ ಕಂಠಸಿರಿಯೂ ಭಿನ್ನ.
ಸಂದ ಪ್ರಶಸ್ತಿಗಳು
ಅವರ ಅದ್ಭುತ ಅರ್ಥಗಾರಿಕೆ, ಶಿಸ್ತುಬದ್ಧ ನೃತ್ಯ ಮತ್ತು ವಚೋವೈಖರಿಗೆ 2016ರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಸಂಘ, ಸಂಸ್ಥೆಗಳಿಂದ ಸನ್ಮಾನ, ಬಿರುದುಗಳು ಸಂದಿವೆ.
ಇದನ್ನೂ ಓದಿ : ನಮಗೆ ಯಾವ ಭಾಗ್ಯವೂ ಬೇಡ, ಗುಂಡಿ ಮುಚ್ಚುವ ಭಾಗ್ಯ ನೀಡಿ : ಗ್ರಾಮಸ್ಥರ ಗೋಳು



















