ತಮಿಳುನಾಡಿನ AIADMK ಪಕ್ಷದ ಸಂಸದ ಸಿ.ವಿ ಷಣ್ಮುಗಂ, ಮಹಿಳಾ ಸುರಕ್ಷತೆಯ ಕುರಿತಾದ ಪ್ರತಿಭಟನೆಯಲ್ಲಿಯೇ ನಟಿ ನಯನತಾರಾ ಅವರ ಬಗ್ಗೆ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಕಾಲೆಳೆಯುವ ಉದ್ದೇಶದಿಂದ ಹೇಳಿಕೆ ನೀಡಿದ ಎಐಎಡಿಎಂಕೆ ಸಂಸದ ಸಿ.ವಿ ಷಣ್ಮುಗಂ, “ನನ್ನ ಕನಸು ನಯನತಾರಾ ಅವರನ್ನು ಮದುವೆಯಾಗುವುದು ಆಗಿದ್ದರೆ, ಸರ್ಕಾರ ಅದನ್ನು ಈಡೇರಿಸುತ್ತದೆಯೇ?” ಎಂದು ಪ್ರಶ್ನಿಸಿದ್ದಾರೆ. ಇತ್ತೀಚೆಗೆ ಸಿಎಂ ಸ್ಟಾಲಿನ್ ಅವರು, “ತಮಿಳುನಾಡಿನ ಜನರು ತಮ್ಮ ಕನಸುಗಳನ್ನು ಹಂಚಿಕೊಳ್ಳಬೇಕು. ಅದನ್ನು ಈಡೇರಿಸಲು ಸರ್ಕಾರ ಶ್ರಮಿಸಲಿದೆ” ಎಂದು ಹೇಳಿದ್ದರು. ಸ್ಟಾಲಿನ್ ಅವರ ಈ ಹೇಳಿಕೆಯನ್ನು ಟೀಕಿಸಲು ನಟಿ ನಯನತಾರಾ ಅವರ ಹೆಸರನ್ನ ಬಳಸಿ ಎಐಎಡಿಎಂಕೆ ಸಂಸದ ಸಿ.ವಿ ಷಣ್ಮುಗಂ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ.
“ಅಬ್ದುಲ್ ಕಲಾಂ ನಮಗೆ ಕನಸು ಕಾಣಲು ಹೇಳಿದರು. ಸ್ಟಾಲಿನ್ ಕೂಡ ನಮ್ಮ ಕನಸುಗಳನ್ನು ಹಂಚಿಕೊಳ್ಳಲು ಹೇಳಿದ್ದಾರೆ. ಒಂದು ವೇಳೆ, ನಾನು ನಯನತಾರಾ ಬೇಕೆಂದು ಕೇಳಿದರೆ, ಸ್ಟಾಲಿನ್ ನನ್ನ ಕನಸನ್ನು ಈಡೇರಿಸುತ್ತಾರೆಯೇ? ಯಾರಾದರೂ ತಮಗೆ ನಯನತಾರಾ ಜೊತೆ ಮದುವೆ ಮಾಡಿಸಿಕೊಡಿ ಎಂದು ಕೇಳಿದರೆ, ಅವರು ಆ ಕನಸನ್ನು ನನಸು ಮಾಡ್ತಾರಾ” ಎಂದು ಅವರು ಕಿಡಿಗೇಡಿತನದ ಪ್ರಶ್ನೆಯನ್ನು ಬಹಿರಂಗವಾಗಿ ಕೇಳಿದ್ದಾರೆ.
ವಿಪರ್ಯಾಸ ಎಂದರೆ, ಮಹಿಳೆಯರ ಘನತೆ ಮತ್ತು ಸುರಕ್ಷತೆಗಾಗಿ ಎಐಎಡಿಎಂಕೆ ಪಕ್ಷ ನಡೆಸುತ್ತಿದ್ದ ಪ್ರತಿಭಟನೆಯಲ್ಲೇ ಇಂತಹ ಕೀಳುಮಟ್ಟದ ಹೇಳಿಕೆ ಬಂದಿರುವುದು ವಿವಾದದ ತೀವ್ರತೆಯನ್ನು ಹೆಚ್ಚಿಸಿದೆ. ಈ ಸಂದರ್ಭದಲ್ಲಿ ಸಂಸದರ ಪಕ್ಕದಲ್ಲೇ ನಿಂತಿದ್ದ ಪಕ್ಷದ ಇತರ ಮುಖಂಡರು ಸಹ ಈ ಹೇಳಿಕೆಯನ್ನು ಕೇಳಿ ನಗುತ್ತಾ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಪತ್ನಿಯನ್ನು ರೈಲ್ವೆ ಹಳಿಗೆ ತಳ್ಳಿ ಕೊಂದ ಪಾಪಿ ಪತಿ



















