ದ.ಕನ್ನಡ : ದಕ್ಷಿಣ ಕನ್ನಡದ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ರಕ್ಷಣೆ ಕೋರಿ ಬಂದ ಮಹಿಳೆಯರಿಗೆ ಲೈಂಗಿಕ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ಆಡಿಯೋ, ವಿಡಿಯೋಗಳು ವೈರಲ್ ಆಗಿವೆ. ಆದರೆ, ಇನ್ಸ್‌ಪೆಕ್ಟರ್ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಇನ್ನು ಇದೀಗ ಇನ್ಸ್‌ಪೆಕ್ಟರ್ ಸಂದೇಶ್ ಮೇಲೆ ಲೈಂಗಿಕ ಆರೋಪ ಮಾಡಿರುವ ಸಂತ್ರಸ್ತ ಮಹಿಳೆ ವಿರುದ್ಧವೇ ಆಕೆಯ ಸಹೋದರಿ ಗಂಭೀರ ಆರೋಪ ಮಾಡಿ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ.
ಮೂಡುಬಿದಿರಿ ಇನ್ಸ್‌ಪೆಕ್ಟರ್ ಸಂದೇಶ್ ಮೇಲಿನ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಸಂತ್ರಸ್ತೆ ಸಹೋದರಿ, ಇಡೀ ಪ್ರಕರಣದಲ್ಲಿ ಸಂದೇಶ್ ನಿರಪರಾಧಿ ಎಂದಿದ್ದಾರೆ. ಕುಟುಂಬ ಕಲಹದ ಮೇಲಿನ ದ್ವೇಷದಿಂದ ಇನ್ಸ್‌ಪೆಕ್ಟರ್ ಮೇಲೆ ಸಂತ್ರಸ್ತೆ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಸಂದೇಶ್ ಉತ್ತಮ ವ್ಯಕ್ತಿ, ನನ್ನ ಸಹೋದರಿ ಇಲ್ಲ ಸಲ್ಲದ ದ್ವೇಷದಿಂದ ಹಗೆತನ ಸಾಧಿಸುತ್ತಿದ್ದಾರೆ. ಸಂದೇಶ್ ನ್ಯಾಯದ ಪರವಾಗಿದ್ದಾರೆ. ನಾನು ಸ್ವಯಂ ಆಗಿ ಹೇಳುತ್ತಿದ್ದೇನೆ, ನನಗೆ ಯಾರೂ ಈ ರೀತಿ ಹೇಳುವಂತೆ ಸೂಚಿಸಿಲ್ಲ ಎಂದು ಸಂತ್ರಸ್ತೆ ಸಹೋದರಿ ಸ್ಪಷ್ಟಪಡಿಸಿದ್ದಾರೆ.
ಇನ್ಸ್ಪೆಕ್ಟರ್ ಸಂದೇಶ್ ಮೊದಲು ಪರಿಚಯ ಇರಲಿಲ್ಲ. ಸ್ಟೇಷನ್ ಗೆ ಹೋದಾಗಲೇ ಮಾತನಾಡಿರುವುದು. ಕೌಟುಂಬಿಕ ಕಲಹದ ವಿಚಾರದಲ್ಲಿ ನಾನು ದೂರು ಕೊಟ್ಟಿದ್ದು. ಈ ವಿಚಾರದಲ್ಲಿ ಸಹೋದರಿ (ಪ್ರಕರಣದ ಸಂತ್ರಸ್ತೆ) ಪ್ರವೇಶ ಮಾಡುವ ಅವಶ್ಯಕತೆ ಇರಲಿಲ್ಲ. ನನ್ನ ಗಂಡ ಮತ್ತು ಮಗನನ್ನು ಸಹೋದರಿ ಮನೆಯಿಂದ ಕರೆದುಕೊಂಡು ಬರುವಂತೆ ದೂರು ನೀಡಿದ್ದೆ. ನನ್ನ ತಾಯಿಯನ್ನು ನೋಡಲು ಹೋದ ನನ್ನ ಗಂಡ ಮತ್ತು ಮಗನನ್ನು ವಾಪಸು ಬರೋದಕ್ಕೆ ಬಿಟ್ಟಿಲ್ಲ.ನನ್ನ ಗಂಡ,ಮಗ ಬೇಕು ಎಂದಯ ದೂರು ಕೊಟ್ಟಿದ್ದು ತಪ್ಪಾ? ಇನ್ಸ್ಪೆಕ್ಟರ್ ನ ಕೆಲಸ ತೆಗಿಸುವುದಾಗಿ ಆಕೆ ಶಪಥ ಮಾಡಿ ಹೋಗಿದ್ದಾಳೆ. ಇನ್ಸ್ಪೆಕ್ಟರ್ ಮೇಲೆ ನನಗೆ ಬೇರೆ ರೀತಿಯ ಭಾವನೆ ಇಲ್ಲ. ನನಗೆ ಅಣ್ಣ, ಅವರಿಗೆ ನಾನು ಅಕ್ಕ ಇದ್ದಂತೆ ಎಂದು ಸಂತ್ರಸ್ತೆ ಸಹೋದರಿ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.
ದೇವರು ನೋಡುತ್ತಾನೆ. ಸುಳ್ಳು ಆರೋಪ ಮಾಡಬಾರದು. ಠಾಣೆಯಲ್ಲಿನ ಸಿಸಿ ಕ್ಯಾಮರಾ ಬೇಕಾದರೂ ನೋಡಲಿ ಸತ್ಯ ಗೊತ್ತಾಗುತ್ತೆ. ಇನ್ಸ್ಪೆಕ್ಟರ್ ಮೇಲೆ ಒಂದಾದ ಮೇಲೆ ಒಂದು ಕೇಸು ಹಾಕುತ್ತಿದ್ದಾಳೆ. ನನ್ನ ಗಂಡ ಈಗ ಬಾಂಬೆಯಲ್ಲಿದ್ದಾರೆ. ಮಗ ಸಹೋದರಿ ಜೊತೆ ಇದ್ದಾನೆ. ಮಗನಿಗೆ ಹಲವು ಆಮಿಷ ನೀಡಿದ್ದಾಳೆ. ಸಹೋದರಿ ಹೇಳಿಕೊಟ್ಟು ಬೇರೆ ಮಹಿಳೆಯರಿಂದ ಸುಳ್ಳು ಹೇಳಿಸಿದ್ದಾಳೆ. ಹಣ ಕೊಟ್ರೆ ಏನು ಬೇಕಾದರೂ ಮಾಡುತ್ತಾರೆ. ಇವಳ ಹಿಂದೆ ಬೇರೆಯವರು ಇದ್ದಾರೆ. ಹೋದ ಎಲ್ಲಾ ಕಡೆಯು ಅಧಿಕಾರಿಗಳ ವಿರುದ್ಧ ದೂರು ಕೊಡುತ್ತಾಳೆ. ಆಕೆಯ ವಿಚಾರದಲ್ಲಿ ಮಾತ್ರ ನಾನು ಮಾತನಾಡಬಹುದು. ಉಳಿದ ವಿಚಾರದಲ್ಲಿ ನಾನು ಹೇಳಲು ಸಾಧ್ಯವಿಲ್ಲ. ಸಂದೇಶ್ ನನ್ನು ಕೆಲಸದಿಂದ ಕೆಲಗಿಳಿಸಬೇಕೆಂದು ಇವಳಿಗೆ ಹಠ. ಅದಕ್ಕಾಗಿ ತಂಡ ಮಾಡಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಸಂದೇಶ್ ಮೇಲೆ ಬಂದಿರುವ ಆರೋಪಗಳೆಲ್ಲ ಸುಳ್ಳು. ನಮ್ಮ ಪ್ರಕರಣದಿಂದಾಗಿ ಸಂದೇಶ್ ಅವರ ಹೆಸರು ಹಾಳಾಗಬಾರದು ಎಂದಿದ್ದಾರೆ.
ಗೃಹ ಸಚಿವರಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಪತ್ರ
ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಮಹಿಳೆಯರಿಗೆ ಕಿರುಕುಳ ಆರೋಪ ಸಂಬಂಧ ಶಾಸಕ ಉಮಾನಾಥ್ ಕೋಟ್ಯಾನ್ ಗೃಹ ಸಚಿವರಿಗೆ ಪತ್ರ ಬರೆದಿದ್ದು, ಸಂದೇಶ್ ಅವರನ್ನು ಅಮಾನತ್ತಿನಲ್ಲಿಟ್ಟು ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ. ಇದೊಂದು ಗಂಭೀರ ಪ್ರಕರಣ. ಈ ಪ್ರಕರಣದಿಂದ ಇಲಾಖೆಯ ಘನತೆಗೆ ಚ್ಯುತಿ ಬಂದಿದೆ. ಸಂದೇಶ್ ವಿರುದ್ದ ಇಲಾಖಾ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಸ್ವಪಕ್ಷದ ಮುಖಂಡನಿಂದಲೇ ಹಲ್ಲೆ ಆರೋಪ – ಪ್ರಧಾನಿ ಮೋದಿಗೆ ಪತ್ರ ಬರೆದ ಕಾಂಗ್ರೆಸ್ ನಾಯಕಿ!



















