ಚಿಕ್ಕಮಗಳೂರು : ಕಾಂಗ್ರೆಸ್ ಮುಖಂಡನಿಂದಲೇ ಕಾಂಗ್ರೆಸ್ ನಾಯಕಿ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಕಾಂಗ್ರೆಸ್‌ನ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಚೇತನಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇ-ಮೇಲ್ ಮೂಲಕ ಪತ್ರ ಬರೆದು ದೂರು ನೀಡಿದ್ದಾರೆ.
ಕಳೆದ ಫೆಬ್ರವರಿ 28ರ ರಾತ್ರಿ ತಮ್ಮ ಮನೆಗೆ ನುಗ್ಗಿ ಕಾಂಗ್ರೆಸ್ ಮುಖಂಡ ರಾಹಿಲ್ ಷರೀಫ್ ಹಲ್ಲೆ ಮಾಡಿದ್ದಾನೆ. ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ ಕಾಂಗ್ರೆಸ್ ಮುಖಂಡ ರಾಹಿಲ್ ಷರೀಫ್ ವಿರುದ್ಧ ಸಮಗ್ರ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಮತ್ತು ತನಗೂ ಕುಟುಂಬಕ್ಕೂ ರಕ್ಷಣೆ ನೀಡುವಂತೆ ಕಾಂಗ್ರೆಸ್‌ನ ಮಹಿಳಾ ನಾಯಕಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಘಟನೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ನಡೆದಿದೆ. ಚೇತನಾ ಅವರ ಮನೆಯನ್ನು ಬಾಡಿಗೆಗೆ ಪಡೆದಿದ್ದ ರಾಹಿಲ್ ಷರೀಫ್ ಮನೆ ಖಾಲಿ ಮಾಡಿಸಿದ್ದಕ್ಕೆ ಕೋಪಗೊಂಡು ರಾತ್ರಿ ಮನೆಗೆ ನುಗ್ಗಿ ಚೇತನಾ ಮತ್ತು ಅವರ ಪತಿಯ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ. ಈ ಘಟನೆಯಲ್ಲಿ ದಂಪತಿಗಳಿಗೆ ಗಾಯಗಳಾಗಿತ್ತು. ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದು, ರಾಹಿಲ್ ಷರೀಫ್‌ರನ್ನು ರಾಜಸ್ಥಾನದ ಅಜ್ಮೀರ್‌ನಲ್ಲಿ ಬಂಧಿಸಲಾಗಿದೆ. ನೇಪಾಳಕ್ಕೆ ತಪ್ಪಿಸಿಕೊಳ್ಳುವ ಯೋಜನೆಯಲ್ಲಿದ್ದ ಆತನನ್ನು ಪೊಲೀಸರು ಹಿಡಿದಿದ್ದಾರೆ. ಬಂಧನದ ನಂತರ ಎದೆ ನೋವು ಎಂದು ಆತ ಹೇಳಿದ್ದು, ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಅವರಿಗೆ ವಿಶೇಷ ರಕ್ಷಣೆ ನೀಡಲಾಗುತ್ತಿದೆ ಎಂದು ಚೇತನಾ ಆರೋಪ ಮಾಡಿದ್ದಾರೆ.
ಚೇತನಾ ಅವರ ಪತ್ರದಲ್ಲಿ ಮುಖ್ಯವಾಗಿ ಎರಡು ಆರೋಪಗಳಿವೆ. ಮೊದಲನೆಯದು, ಕಾಂಗ್ರೆಸ್ ಮುಖಂಡನಾಗಿರುವ ಕಾರಣಕ್ಕೆ ರಾಹಿಲ್ ವಿರುದ್ಧ ಸಮಗ್ರ ತನಿಖೆ ನಡೆಯುತ್ತಿಲ್ಲ ಎಂಬುದು. ಎರಡನೆಯದು, ರಾಹಿಲ್ ಷರೀಫ್ ಅವರ ಮೊಬೈಲ್‌ನಲ್ಲಿ ಹಲವು ಹಿಂದೂ ಯುವತಿಯರ ಅಶ್ಲೀಲ ವಿಡಿಯೋಗಳು ಕಂಡುಬಂದಿವೆ. ಹಲವು ಹಿಂದೂ ಹೆಣ್ಣು ಮಕ್ಕಳನ್ನು ಬಳಸಿಕೊಂಡು ಲವ್ ಜಿಹಾದ್ ನಡೆಸುವ ಯತ್ನ ಮಾಡಿದ್ದಾನೆ ಎಂದು ಚೇತನಾ ಆರೋಪಿಸಿದ್ದಾರೆ. ಇದು ರಾಹಿಲ್ ಮೊದಲ ಪ್ರಕರಣವಲ್ಲ. ಹಿಂದೆಯೂ ಹಲವು ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದ ಈತ ಒಮ್ಮೆ ಹಿಂದೂ ಯುವತಿಯ ಮನೆಯಲ್ಲಿ ಸಿಕ್ಕಿಬಿದ್ದಿದ್ದ ಎಂದು ಚೇತನಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಚೇತನಾ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿಯಾಗಿದ್ದು, ದಲಿತ ಸಮುದಾಯದ ಪ್ರಮುಖ ನಾಯಕಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಘಟನೆಯ ನಂತರ ತಮಗೆ ಮತ್ತು ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ‘ಆತ ಪ್ರಭಾವಿ ಕಾಂಗ್ರೆಸ್ ಮುಖಂಡ ಎಂಬ ಕಾರಣಕ್ಕಾಗಿ ನನಗೆ ನ್ಯಾಯ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರ ಸಮಗ್ರ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು’ ಎಂದು ಅವರು ಬೇಡಿಕೊಂಡಿದ್ದಾರೆ.
ರಾಹಿಲ್ ಷರೀಫ್ ಅವರನ್ನು ಅಜ್ಮೀರ್‌ನಲ್ಲಿ ಬಂಧಿಸಿದ ನಂತರ ಚಿಕ್ಕಮಗಳೂರಿಗೆ ಕರೆತರಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಆರೋಪಗಳು ಕೇಳಿಬರುತ್ತಿವೆ. ಈ ಘಟನೆ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಆಂತರಿಕ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : MBBS ಪಾಸಾದವರಿಗೆ ಗುಡ್ ನ್ಯೂಸ್.. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇಮಕ



















