ಬೆಂಗಳೂರು : ಅಮೆರಿಕ ಹಾಗೂ ಇರಾನ್ ಸೇರಿ ಹಲವು ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಭಾರತದಲ್ಲಿ ಅಡುಗೆ ಅನಿಲ ಸಿಲಿಂಡರ್ (LPG) ಕೊರತೆಯಾಗಿದೆ ಎಂದು ವರದಿಯಾಗುತ್ತಿವೆ. ಗ್ಯಾಸ್ ಬುಕ್ ಮಾಡಿದರೆ ಬೇಗ ಮನೆಗೆ ತಲುಪಿಸುತ್ತಿಲ್ಲ ಎಂದು ಜನ ದೂರುತ್ತಿದ್ದಾರೆ. ಇದರ ಮಧ್ಯೆಯೇ, ಮನೆಯಲ್ಲಿ ಎಷ್ಟು ಗ್ಯಾಸ್ ಸಿಲಿಂಡರ್‌ಗಳನ್ನು ಇಟ್ಟುಕೊಳ್ಳಬಹುದು ಎಂಬ ನಿಯಮ ತಿಳಿದರೆ ಒಳಿತು. ಇಲ್ಲದಿದ್ದರೆ, ಜೈಲು ಸೇರಬೇಕಾಗುತ್ತದೆ ಎಂಬುದು ಗೊತ್ತಿರಬೇಕು.
ಹೌದು.. ದೇಶದಲ್ಲಿ ಪ್ರತಿ ಮನೆಗೆ ಒಂದೇ ಅಡುಗೆ ಅನಿಲ ಸಂಪರ್ಕ ಇರಬೇಕು. ಹಾಗೂ, ಒಂದು ಬಳಕೆಗೆ ಹಾಗೂ ಇನ್ನೊಂದು ರಿಫಿಲ್ ಗೆ ಎಂದು ಎರಡು ಅಡುಗೆ ಅನಿಲ ಸಿಲಿಂಡರ್ ಗಳನ್ನು ಇಟ್ಟುಕೊಳ್ಳಬಹುದು. ಇದಕ್ಕಿಂತ ಹೆಚ್ಚಿನ ಸಿಲಿಂಡರ್ ಗಳನ್ನು ಮನೆಯಲ್ಲಿ ಇಟ್ಟುಕೊಂಡರೆ, ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗೆಯೇ, ಭಾರಿ ದಂಡವನ್ನೂ ಕಟ್ಟಬೇಕಾಗುತ್ತದೆ.
ದಂಡ, ಶಿಕ್ಷೆ ಏನೇನು?
ಭಾರತೀಯ ದಂಡ ಸಂಹಿತೆ ಮತ್ತು ಅಗತ್ಯ ವಸ್ತುಗಳ ಕಾಯ್ದೆ (Essential Commodities Act, 1955) ಅಡಿಯಲ್ಲಿ ಅಕ್ರಮವಾಗಿ ಸಿಲಿಂಡರ್ ಸಂಗ್ರಹಿಸುವುದು ಅಪರಾಧವಾಗಿದೆ. ನಿಯಮ ಉಲ್ಲಂಘಿಸಿದರೆ 3 ತಿಂಗಳಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು. ನ್ಯಾಯಾಲಯವು ನಿಗದಿಪಡಿಸುವ ಭಾರಿ ಮೊತ್ತದ ದಂಡವನ್ನು ತೆರಬೇಕಾಗುತ್ತದೆ. ಅಕ್ರಮವಾಗಿ ಇಟ್ಟುಕೊಂಡಿರುವ ಎಲ್ಲಾ ಸಿಲಿಂಡರ್ ಗಳನ್ನು ಮತ್ತು ಗ್ಯಾಸ್ ಒಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಬಹುದು.
ಮನೆ ಬಳಕೆಯ ಸಿಲಿಂಡರ್ ಗಳನ್ನು ಹೋಟೆಲ್, ಕ್ಯಾಂಟೀನ್ ಅಥವಾ ಗಾಡಿಗಳಲ್ಲಿ ಬಳಸುವುದು ಕಂಡುಬಂದರೆ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಸಿಲಿಂಡರ್ ಗಳನ್ನು ಸಂಗ್ರಹಿಸುವುದು ಸ್ಫೋಟದಂತಹ ಅನಾಹುತಗಳಿಗೆ ಕಾರಣವಾಗಬಹುದು. ಅಗ್ನಿ ಅವಘಡ ಸಂಭವಿಸಿದರೆ, ಅಕ್ರಮವಾಗಿ ಸಿಲಿಂಡರ್ ಇಟ್ಟುಕೊಂಡವರಿಗೆ ವಿಮೆ ಸೌಲಭ್ಯ ಕೂಡ ಸಿಗುವುದಿಲ್ಲ.
ಇದನ್ನೂ ಓದಿ : ಪಂಚ ಪಾಲಿಕೆ ಚುನಾವಣೆ : ಕರಡು ಮತದಾರರ ಆಕ್ಷೇಪಣೆ ಸಲ್ಲಿಸಲು ಅವಧಿ ವಿಸ್ತರಿಣೆ


















