ಬೆಂಗಳೂರು : ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಬಾನು ಮುಷ್ತಾಕ್ ಅವರ ವಿರುದ್ಧ ಸರ್ಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ, ಮಂಡ್ಯ ಜಿಲ್ಲೆಯಲ್ಲಿ ಬಾನು ಮುಷ್ತಾಕ್ ಅವರು ಚಪ್ಪಲಿ ಧರಿಸಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಫೋಟೊಗೆ ಪುಷ್ಪಾರ್ಚನೆ ಮಾಡಿದ್ದನ್ನು ನಾನು ಖಂಡತುಂಡವಾಗಿ ಖಂಡಿಸುತ್ತೇನೆ. ಸರ್ಕಾರ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನನ್ನ ಪ್ರಕಾರ ಬಾನು ಮುಷ್ತಾಕ್ ಅವರು ಅಲ್ಲಾಹರನ್ನು ಚಪ್ಪಲಿಗೆ ಹೋಲಿಸಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರರಿಗೂ ಹಾಗೂ ಅವರನ್ನು ದೇವರೆಂದು ನಂಬಿದ್ದವರಿಗೆ ಅಪಮಾನ ಮಾಡಿದ್ದಾರೆ. ಹಿಂದೂಗಳಿಗೆ ಮತ್ತು ಮುಸಲ್ಮಾನರಿಗೆ ಅಪಮಾನ ಮಾಡಿದ ಅವರ ದುರಹಂಕಾರಕ್ಕೆ ನನ್ನ ಧಿಕ್ಕಾರವಿದೆ ಎಂದು ಹೇಳಿದ್ದಾರೆ.
ದಸರಾ ಉದ್ಘಾಟನೆಗೆ ಅವರನ್ನು ಕರೆದಾಗಲೇ ನಾವು ವಿರೋಧ ಮಾಡಿ, ಅವರು ಕನ್ನಡದ ವಿರೋಧಿ ಎಂದು ಹೇಳಿದ್ದೇವು. ಅಂಥ ಸಮಯದಲ್ಲಿ ರಾಜ್ಯದಲ್ಲಿರುವ ಅನೇಕ ದಲಿತ ಸಂಘಟನೆಗಳು, ದಲಿತ ಹೋರಾಟಗಾರರು ಅವರ ಸಹಕಾರಕ್ಕೆ ನಿಂತಿದ್ದರು. ಈಗ ಆ ದಲಿತ ಸಂಘಟನೆಗಳ ಮುಖಂಡರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇಸ್ಲಾಮಿನ ಅಥವಾ ಮುಸಲ್ಮಾನರ ದೇವರು ಅಲ್ಲಾಹ ಎಂಬುದು ಈ ಪ್ರಪಂಚಕ್ಕೆ ಗೊತ್ತಿರುವ ವಿಚಾರ. ಆ ಕಾರಣಕ್ಕೆ ಇಸ್ಲಾಂ ಬಂಧುಗಳು ಅಲ್ಲಾಹನನ್ನು ಪ್ರಾರ್ಥಿಸುವವರು, ಅದಕ್ಕೆ ನಾವು ಕೂಡ ಅದನ್ನು ಗೌರವಿಸುತ್ತೇವೆ ಎಂದು ತಿಳಿಸಿದರು. ಆದರೆ, ಬಾನು ಮುಷ್ತಾಕ್ ಅವರು ಚಪ್ಪಲಿ ನನ್ನ ಮನೆದೇವರು; ಆದ್ದರಿಂದ ನಾನು ಚಪ್ಪಲಿ ಧರಿಸಿಯೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಪುಷ್ಪಾರ್ಚನೆ ಮಾಡಿದ್ದೇನೆ ಎಂದು ಹೇಳಿ ಅವರ ನಡೆಯನ್ನು ಮತ್ತೊಮ್ಮೆ ಉದ್ಧಟತನದಿಂದ ಸಮರ್ಥಿಸಿಕೊಂಡಿದ್ದಾರೆ. ಆದ್ದರಿಂದ ಅವರು ಕ್ಷಮೆಗೆ ಅರ್ಹರಲ್ಲ ಎಂದಿದ್ದಾರೆ.
ಬಾನು ಮುಷ್ತಾಕ್ ಅವರು ಇನ್ನು ಮುಂದೆ ಸಭೆ, ಸಮಾರಂಭಗಳಿಗೆ ಬಂದರೆ ದಲಿತ ಸಮುದಾಯಗಳು ಹಾಗೂ ಇಸ್ಲಾಂ ಸಮುದಾಯಗಳು ಅವರಿಗೆ ಛೀಮಾರಿ ಹಾಕ್ಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : ದಾವಣಗೆರೆ ಬೈ ಎಲೆಕ್ಷನ್ : ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ



















