ಲಾಸ್ ಏಂಜಲೀಸ್ : ವಿಶ್ವದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿಯಾದ 98ನೇ ಅಕಾಡೆಮಿ ಅವಾರ್ಡ್ಸ್ (ಆಸ್ಕರ್ 2026) ಸಮಾರಂಭವು ಕೇವಲ ಸಿನಿಮಾ ಸಂಭ್ರಮಕ್ಕೆ ಮಾತ್ರವಲ್ಲದೆ, ಜಾಗತಿಕ ರಾಜಕೀಯ ಸಂದೇಶಕ್ಕೂ ವೇದಿಕೆಯಾಯಿತು. ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡಗಳ ನಡುವೆ ನಡೆದ ಈ ಸಮಾರಂಭದಲ್ಲಿ, ಖ್ಯಾತ ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರು ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿ “ಯುದ್ಧ ಬೇಡ, ಪ್ಯಾಲೆಸ್ತೀನ್‌ಗೆ ಸ್ವಾತಂತ್ರ್ಯ ಸಿಗಲಿ” ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.
ವೇದಿಕೆಯಲ್ಲಿ ಮೊಳಗಿದ ಶಾಂತಿ ಮಂತ್ರ
ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಘೋಷಿಸಲು ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಜೇವಿಯರ್ ಬಾರ್ಡೆಮ್ ವೇದಿಕೆಯ ಮೇಲೆ ಆಗಮಿಸಿದರು. ತಮ್ಮ ಟುಕ್ಸೆಡೋ ಕೋಟ್ ಮೇಲೆ “ಯುದ್ಧ ಬೇಡ” (No to War) ಎಂಬ ಪಿನ್ ಧರಿಸಿದ್ದ ಬಾರ್ಡೆಮ್, ಪ್ರಶಸ್ತಿ ನೀಡುವ ಮುನ್ನ “ಯುದ್ಧ ನಿಲ್ಲಲಿ ಮತ್ತು ಪ್ಯಾಲೆಸ್ತೀನ್‌ಗೆ ಮುಕ್ತಿ ಸಿಗಲಿ” ಎಂದು ಹೇಳುತ್ತಿದ್ದಂತೆ ಸಭಾಂಗಣದಲ್ಲಿದ್ದ ಗಣ್ಯರಿಂದ ಭಾರಿ ಹರ್ಷೋದ್ಗಾರ ವ್ಯಕ್ತವಾಯಿತು. ಇದಕ್ಕೂ ಮುನ್ನ ರೆಡ್ ಕಾರ್ಪೆಟ್ ಮೇಲೆ ಮಾತನಾಡಿದ್ದ ಅವರು, ಈ ಯುದ್ಧವನ್ನು ಡೊನಾಲ್ಡ್ ಟ್ರಂಪ್ ಮತ್ತು ನೆತನ್ಯಾಹು ಅವರ ಸುಳ್ಳಿನಿಂದ ಸೃಷ್ಟಿಯಾದ ‘ಅಕ್ರಮ ಯುದ್ಧ’ ಎಂದು ಕಟುವಾಗಿ ಟೀಕಿಸಿದರು.
‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಚಿತ್ರಕ್ಕೆ 6 ಪ್ರಶಸ್ತಿಗಳ ಗರಿ
ಈ ಬಾರಿಯ ಆಸ್ಕರ್ ಸಮಾರಂಭದಲ್ಲಿ ಪೌಲ್ ಥಾಮಸ್ ಆಂಡರ್ಸನ್ ನಿರ್ದೇಶನದ, ಲಿಯೊನಾರ್ಡೊ ಡಿಕಾಪ್ರಿಯೊ ನಟನೆಯ ‘ಒನ್ ಬ್ಯಾಟಲ್ ಆಫ್ಟರ್ ಅನದರ್’ (One Battle After Another) ಚಿತ್ರವು ಅಧಿಪತ್ಯ ಸ್ಥಾಪಿಸಿದೆ. ಒಟ್ಟು 13 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದ ಈ ಚಿತ್ರವು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಸೇರಿದಂತೆ ಒಟ್ಟು ಆರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಇನ್ನು ರಿಯಾನ್ ಕೂಗ್ಲರ್ ಅವರ ‘ಸಿನ್ನರ್ಸ್’ 4 ಹಾಗೂ ಗಿಲ್ಲೆರ್ಮೊ ಡೆಲ್ ಟೊರೊ ಅವರ ‘ಫ್ರಾಂಕೆನ್‌ಸ್ಟೈನ್’ 3 ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ. ವಿಶೇಷವೆಂದರೆ, ನಾರ್ವೆಯ ‘ಸೆಂಟಿಮೆಂಟಲ್ ವ್ಯಾಲ್ಯೂ’ ಸಿನಿಮಾ ಅತ್ಯುತ್ತಮ ಅಂತರಾಷ್ಟ್ರೀಯ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇದೇ ವೇಳೆ ಕಾರ್ಯಕ್ರಮದಲ್ಲಿ, ಸತತ ಎರಡನೇ ಬಾರಿಗೆ ಆಸ್ಕರ್ ಸಮಾರಂಭದ ನಿರೂಪಣೆ ವಹಿಸಿದ್ದ ಕೋನನ್ ಒಬ್ರೇನ್, ಪ್ರಸ್ತುತ ವಿಶ್ವದಾದ್ಯಂತ ಇರುವ ಭಯಾನಕ ಮತ್ತು ಅಸ್ಥಿರ ವಾತಾವರಣದ ನಡುವೆಯೂ ಸಿನಿಮಾಗಳು ಹೇಗೆ ಜನರನ್ನು ಬೆಸೆಯುತ್ತವೆ ಎಂಬ ಬಗ್ಗೆ ಮಾತನಾಡಿದರು. “ಪ್ರತಿ ಸಿನಿಮಾವೂ ಸಾವಿರಾರು ಜನರ ಪರಿಶ್ರಮ ಮತ್ತು ಜಾಗತಿಕ ಕಲಾತ್ಮಕತೆಯ ಸಂಕೇತವಾಗಿದೆ. ಇಂದಿನ ಕಾಲಕ್ಕೆ ಅತ್ಯಂತ ಅಗತ್ಯವಿರುವ ಗುಣವೆಂದರೆ ಅದು ಆಶಾವಾದ,” ಎಂದು ಅವರು ತಮ್ಮ ಆರಂಭಿಕ ಭಾಷಣದಲ್ಲಿ ಮಾರ್ಮಿಕವಾಗಿ ನುಡಿದರು.
ಇದನ್ನೂ ಓದಿ : ಸ್ಕೂಲ್‌ನಲ್ಲಿ ಮಗುವನ್ನ ಹೊರಗೆ ನಿಲ್ಲಿಸಿದ ಕೇಸ್ : ಶಾಲೆಗೆ ಭೇಟಿ ನೀಡಿದ ಮಕ್ಕಳ ಆಯೋಗ



















