ಕಮರ್ಷಿಯಲ್ ಎಲ್‌ಪಿಜಿ (LPG) ಸಿಲಿಂಡರ್‌ಗಳ ಕೊರತೆಯಿಂದ ರಾಜ್ಯದ ಹೋಟೆಲ್ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕಳೆದ ಐದು ದಿನಗಳಲ್ಲಿ ಸುಮಾರು 100 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ.
ರಾಜ್ಯದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಸುಮಾರು 4,500 ಹೋಟೆಲ್‌ಗಳು ನೋಂದಾಯಿತ ಹೋಟೆಲ್‌ಗಳಾಗಿವೆ. ಆದರೆ ಎಲ್‌ಪಿಜಿ ಗ್ಯಾಸ್ ಕೊರತೆಯಿಂದ ಅನೇಕ ಹೋಟೆಲ್‌ಗಳಲ್ಲಿ ಅಡುಗೆ ಕಾರ್ಯಕ್ಕೆ ತೊಂದರೆ ಉಂಟಾಗಿ ವ್ಯಾಪಾರ ಕುಸಿತವಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಗ್ಯಾಸ್ ಪೂರೈಕೆಯ ಸಮಸ್ಯೆಯಿಂದ ಹೋಟೆಲ್ ಉದ್ಯಮಕ್ಕೆ ಭಾರಿ ಆರ್ಥಿಕ ಹೊಡೆತ ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರವು ಹೋಟೆಲ್ ಉದ್ಯಮಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ. ಪ್ರಾಪರ್ಟಿ ಟ್ಯಾಕ್ಸ್ ಸೇರಿದಂತೆ ವಿವಿಧ ತೆರಿಗೆಗಳಲ್ಲಿ 20 ರಿಂದ 25 ಶೇಕಡಾ ತನಕ ವಿನಾಯಿತಿ ನೀಡಿದರೆ ಉದ್ಯಮಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯವಾಗುತ್ತದೆ ಎಂದು ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.
ಇದೇ ವೇಳೆ ರಾಜ್ಯದ ಹೋಟೆಲ್‌ಗಳಿಗೆ ಇಂದಿನಿಂದ 20 ಶೇಕಡಾ ಪ್ರಮಾಣದಲ್ಲಿ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಮಾಡಲು ಕೇಂದ್ರದಿಂದ ಸೂಚನೆ ಬಂದಿದ್ದು, ಅದರಂತೆ ಪೂರೈಕೆ ಪ್ರಾರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ. 20 ಶೇಕಡಾ ಪ್ರಮಾಣದಲ್ಲಿ ಗ್ಯಾಸ್ ಪೂರೈಕೆಯಾದರೂ ಹೋಟೆಲ್ ಉದ್ಯಮಕ್ಕೆ ಸ್ವಲ್ಪ ಮಟ್ಟಿನ ಉಸಿರಾಟ ಸಿಗಲಿದೆ ಅಷ್ಟೇ. ಆದರೆ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗಲು ಇನ್ನೂ ಸಮಯ ಬೇಕು ಎಂದು ಹೇಳಿದ್ದಾರೆ.
ಹೋಟೆಲ್ ಉದ್ಯಮ ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಸರ್ಕಾರ ತುರ್ತು ಕ್ರಮವಾಗಿ ತೆರಿಗೆ ವಿನಾಯಿತಿ ನೀಡಬೇಕು ಎಂದು ಹೋಟೆಲ್ ಮಾಲೀಕರ ಸಂಘ ಮತ್ತೊಮ್ಮೆ ಆಗ್ರಹಿಸಿದೆ.
ಇದನ್ನೂ ಓದಿ : ಗ್ಯಾಸ್ ಟ್ರಬಲ್ : 200ಕ್ಕೂ ಹೆಚ್ಚು ಹೋಟೆಲ್ ಸಿಬ್ಬಂದಿಯ ಕೆಲಸಕ್ಕೂ ಕುತ್ತು


















