ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪಾಪಿ ಮಗನೊಬ್ಬ ಆಸ್ತಿಗಾಗಿ ತಾಯಿ ಮೇಲೆಯೇ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪಾಪಿ ಮಗನ ಕ್ರೌರ್ಯಕ್ಕೆ ವೃದ್ಧೆ ಆಸ್ಪತ್ರೆ ಸೇರಿದ್ದಾರೆ. ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಲಕ್ಷ್ಮೀ ಎಂಬವರು ಗಂಭೀರ ಗಾಯಗೊಂಡಿದ್ದಾರೆ.
ಜಯನಗರದ ನಿವಾಸಿ ಲಕ್ಷ್ಮೀ ಹಾಗೂ ಸಣ್ಣಸಿದ್ದಪ್ಪ ದಂಪತಿಗೆ 3 ಜನ ಗಂಡು ಮಕ್ಕಳು. ಈ ಪೈಕಿ ಲಕ್ಷ್ಮೀ ಅವರ ಪತಿ ಸಣ್ಣಸಿದ್ದಪ್ಪ ಮತ್ತು ಎರಡನೇ ಮಗ ಸುರೇಶ್ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಕುಟುಂಬ ಜಯನಗರದಲ್ಲಿ ಮನೆ, ಬನ್ನೇರುಘಟ್ಟ ಬಳಿ ಫ್ಯಾಕ್ಟರಿ ಮತ್ತು ಶಿರಾ ಬಳಿ 7 ಎಕರೆ ಜಮೀನು ಹೊಂದಿದ್ದು, ಆಸ್ತಿಗಾಗಿ ಮೊದಲನೇ ಮಗ ರಮೇಶ್ ಹಾಗೂ ಮೂರನೇ ಮಗ ಪ್ರಕಾಶ್ ನಡುವೆ ಕಲಹ ನಡೆದಿತ್ತು. ಆಸ್ತಿ ಭಾಗ ಆಗಬೇಕೆಂದು ಮೂರನೇ ಮಗ ಪ್ರಕಾಶ್ ಕೋರ್ಟ್ ಮೆಟ್ಟಿಲು ಕೂಡ ಏರಿದ್ದ. 2016ರಿಂದಲೂ ಇದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ ಎನ್ನಲಾಗಿದೆ.
ಈ ನಡುವೆ ನಿನ್ನೆ ಜಯನಗರದ 9ನೇ ಬ್ಲಾಕ್ನ ಮನೆ ಬಳಿ ಬಂದ ಪ್ರಕಾಶ್ ಏಕಾಏಕಿ ಮನೆ ರಿನೋವೇಷನ್ ಮಾಡಲು ಮುಂದಾಗಿದ್ದಾನೆ. ಆಗ ತಾಯಿ ಕೋರ್ಟ್ನಲ್ಲಿ ಕೇಸ್ ಇರುವಾಗ ಇದೆಲ್ಲ ಯಾಕೆ ಮಾಡ್ತೀಯ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕುಪಿತಗೊಂಡ ಮಗ ಪ್ರಕಾಶ್ ತಾಯಿ ಮನೆಯ ವಸ್ತುಗಳನ್ನೆಲ್ಲ ಒಡೆದು ಹಾಳು ಮಾಡಿದ್ದಾನೆ. ಜೊತೆಗೆ ವಾಕಿಂಗ್ ಸ್ಟಿಕ್ನಿಂದ ತಾಯಿಗೆ ತಲೆಗೆ ಹೊಡೆದಿದ್ದಾನೆ.
ತಾಯಿ ಪೆಟ್ಟಾಗಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಲಕ್ಷ್ಮೀ ಅವರನ್ನು ಮೊದಲ ಮಗ ರಮೇಶ್ ಆಸ್ಪತ್ರೆಗೆ ದಾಖಲಿಸಿದ್ದು, ಜಯನಗರ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗ್ತಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ವಿರುದ್ಧ ದೂರು ದಾಖಲಾಗಿದೆ. ಸದ್ಯ FIR ದಾಖಲಿಸಿರೋ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಪ್ರಪಾತಕ್ಕೆ ಬಿದ್ದ ಲಾರಿ!



















