ಬೆಂಗಳೂರು: ನಗರದ ಸಿಟಿ ಪೊಲೀಸರ ಹೆಸರನ್ನೇ ದುರುಪಯೋಗಪಡಿಸಿಕೊಂಡು ಮಹಿಳೆಯೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ ಮಾಡುವ ಯತ್ನ ನಡೆದಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಸೈಬರ್ ಖದೀಮರು ಖಾಸಗಿ ಟೆಲಿಕಾಲ್ ಮೂಲಕ ಮಹಿಳೆಗೆ ಕರೆ ಮಾಡಿದ್ದು, ನಂತರ ಅದನ್ನು ವಿಡಿಯೋ ಕಾಲ್‌ಗೆ ಪರಿವರ್ತಿಸಿದ್ದಾರೆ. ಕರೆ ವೇಳೆ “ನಿಮ್ಮ ತಾಯಿ ಒಂದು ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ, ಈ ಬಗ್ಗೆ ತನಿಖೆ ನಡೆಯಬೇಕು” ಎಂದು ಹೇಳಿದ್ದಾರೆ. ಇದೇ ವೇಳೆ ನಿಮ್ಮ ಮನೆಯ ಲೊಕೇಶನ್ ಕಳಿಸಿ, ವಿಚಾರಣೆಗೆ ಬರಬೇಕು ಎಂದು ಮಹಿಳೆಯ ಮೇಲೆ ಒತ್ತಡ ಹಾಕಿದ್ದಾರೆ.

ಖದೀಮರು ಇನ್ನಷ್ಟು ನಂಬಿಕೆ ಮೂಡಿಸಲು ಸುಪ್ರೀಂ ಕೋರ್ಟ್ ಆದೇಶ ಹಾಗೂ ನಗರ ಪೊಲೀಸ್ ಆಯುಕ್ತರ ಆದೇಶ ಇದೆ ಎಂದು ಹೇಳಿ ನಕಲಿ ದಾಖಲೆಗಳನ್ನು ಕಳುಹಿಸಿದ್ದಾರೆ. ಅಲ್ಲದೆ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರ ಶಿಲ್ ಮತ್ತು ಸಹಿಯನ್ನು ನಕಲಿ ಮಾಡಿ ಆರ್ಡರ್ ಕಾಪಿಯನ್ನೂ ಸಿದ್ಧಪಡಿಸಿದ್ದರು.
ಇದಕ್ಕೂ ಮುನ್ನ ಕರ್ನಾಟಕ ಸಿಐಡಿ ಹೆಸರಲ್ಲಿಯೂ ಆರೋಪಿಗಳನ್ನು ಬಂಧಿಸಿರುವಂತೆ ನಕಲಿ ಪ್ರಕಟಣಾ ಪತ್ರವನ್ನು ಕಳುಹಿಸಿದ್ದಾರೆ. ‘ನೈನಾ ಪ್ರಕಾಶ್’ ಎಂಬುವರ ವಿರುದ್ಧ ಪ್ರಕರಣವಿದೆ ಎಂದು ಕೆಲ ದಾಖಲೆಗಳನ್ನು ಸೃಷ್ಟಿಸಿ ಮಹಿಳೆಗೆ ಕಳುಹಿಸಲಾಗಿದೆ.
ದಾಖಲೆಗಳನ್ನು ನೋಡಿ ಅನುಮಾನಗೊಂಡ ಮಹಿಳೆ ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಬಳಿಕ ಇ-ಮೇಲ್ ಮೂಲಕ ಬೆಂಗಳೂರು ಪೊಲೀಸ್ ಅಧಿಕೃತ ಮೇಲ್‌ಗೆ ಹಾಗೂ Cybercrime.gov.in ವೆಬ್‌ಸೈಟ್‌ನಲ್ಲಿ ಆನ್‌ಲೈನ್ ದೂರು ನೀಡಿದ್ದಾರೆ. ಸದ್ಯ ಮಹಿಳೆಯಿಂದ ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿಗೆ ಬಂತಾ ಆಟೋ ಗ್ಯಾಸ್ ? ನಿಟ್ಟುಸಿರು ಬಿಟ್ಟ ಚಾಲಕರು



















