ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ಪಾಲಿಕೆಗಳ ಅಧಿಕಾರಿಗಳು ಮತ್ತು ನೌಕರರು ಇಂದಿನಿಂದ ಸಾಮೂಹಿಕ ರಜೆ ಹೋರಾಟಕ್ಕೆ ಕರೆ ನೀಡಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಟೌನ್ ಹಾಲ್ನಲ್ಲಿ ಎಲ್ಲಾ ನೌಕರರು ಹಾಗೂ ಅಧಿಕಾರಿಗಳು ಸಭೆ ಸೇರಲಿದ್ದಾರೆ. ಆಡಳಿತಾತ್ಮಕ ಸೌಲಭ್ಯ, ಮುಂಬಡ್ತಿ ಹಾಗೂ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ 29 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ ಸುಮಾರು 3,800ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಅಭಿಯಂತರರು, ಕಂದಾಯ, ಆರೋಗ್ಯ, ಕಾನೂನು ಹಾಗೂ ಲೆಕ್ಕಪತ್ರ ವಿಭಾಗಗಳಲ್ಲಿ ತಕ್ಷಣ ನೇಮಕಾತಿ ಮತ್ತು ಮುಂಬಡ್ತಿ ನೀಡುವಂತೆ ಮನವಿ ಮಾಡಲಾಗಿದೆ. ಜೊತೆಗೆ ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಆರೋಗ್ಯ ಸೌಲಭ್ಯ ನೀಡಲು ಆಗ್ರಹಿಸಲಾಗಿದೆ. ನೌಕರರ ಅಮಾನತು ಆದೇಶವನ್ನು ಹಿಂಪಡೆಯುವಂತೆಯೂ ಒತ್ತಾಯಿಸಲಾಗಿದೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಸಾಮೂಹಿಕ ರಜೆ ಮೂಲಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.


















