ಮುಂಬೈ : ಬಾಲಿವುಡ್ ತಾರೆಯರ ‘ವ್ಯಕ್ತಿತ್ವದ ಹಕ್ಕು’ (Personality Rights) ರಕ್ಷಣೆ ಕೋರಿ ನ್ಯಾಯಾಲಯದ ಮೆಟ್ಟಿಲೇರುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದೀಗ ಕರಾವಳಿ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರೂ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ನಟಿಯ ವ್ಯಕ್ತಿತ್ವ ಹಕ್ಕುಗಳನ್ನು ಎತ್ತಿಹಿಡಿದಿರುವ ಬಾಂಬೆ ಉಚ್ಚ ನ್ಯಾಯಾಲಯವು, ಅವರ ಹೆಸರನ್ನು ಮತ್ತು ಗುರುತನ್ನು ಡಿಜಿಟಲ್ ವೇದಿಕೆಗಳಲ್ಲಿ ದುರ್ಬಳಕೆ ಮಾಡಿಕೊಳ್ಳುವುದರ ವಿರುದ್ಧ ಮಹತ್ವದ ಆದೇಶವನ್ನು ಹೊರಡಿಸಿದೆ.
ಕೋರ್ಟ್ ಆದೇಶದಲ್ಲೇನಿದೆ?
ಶಿಲ್ಪಾ ಶೆಟ್ಟಿ ಕುಂದ್ರಾ ಅವರ ಹೆಸರು, ಚಿತ್ರ, ಧ್ವನಿ, ಅಥವಾ ಅವರ ವ್ಯಕ್ತಿತ್ವವನ್ನು ಯಾವುದೇ ರೀತಿಯಲ್ಲಿ ಅವರ ಒಪ್ಪಿಗೆಯಿಲ್ಲದೆ ಬಳಸುವುದನ್ನು ಅಥವಾ ತಪ್ಪಾಗಿ ಪ್ರತಿನಿಧಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. ಜೊತೆಗೆ, ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿರುವ ಮಾನಹಾನಿಕರ ಮತ್ತು ಹಕ್ಕುಸ್ವಾಮ್ಯ ಉಲ್ಲಂಘಿಸುವ ವಿಷಯಗಳನ್ನು ತಕ್ಷಣವೇ ತೆಗೆದುಹಾಕುವಂತೆ ನ್ಯಾಯಾಲಯ ಸೂಚಿಸಿದೆ. ಸಾರ್ವಜನಿಕ ವ್ಯಕ್ತಿಯೊಬ್ಬರ ಗುರುತು ಮತ್ತು ಖ್ಯಾತಿಯನ್ನು ಅವರ ಅನುಮತಿಯಿಲ್ಲದೆ ವಾಣಿಜ್ಯಿಕವಾಗಿ ಬಳಸಿಕೊಳ್ಳುವುದು ಅಥವಾ ಡಿಜಿಟಲ್ ದುರ್ಬಳಕೆ ಮಾಡುವುದು ಕಾನೂನುಬಾಹಿರ ಎಂಬುದನ್ನು ಈ ಆದೇಶವು ಸ್ಪಷ್ಟಪಡಿಸಿದೆ.
ಇಂಟರ್ನೆಟ್ ಡೀಪ್‌ಫೇಕ್‌ಗಳ ಆಟದ ಮೈದಾನವಲ್ಲ
ಈ ಆದೇಶದ ಕುರಿತು ಪ್ರತಿಕ್ರಿಯಿಸಿರುವ ಶಿಲ್ಪಾ ಶೆಟ್ಟಿ ಪರ ವಕೀಲೆ ಸನಾ ರಯೀಸ್ ಖಾನ್, “ಇಂಟರ್ನೆಟ್ ಡೀಪ್‌ಫೇಕ್‌ಗಳು ಮತ್ತು ಡಿಜಿಟಲ್ ವಂಚನೆಗಳ ಆಟದ ಮೈದಾನವಾಗಲು ಸಾಧ್ಯವಿಲ್ಲ ಎಂಬುದನ್ನು ಬಾಂಬೆ ಹೈಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಾಲಯವು ನಟಿಯ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸಿದ್ದು, ಅವರ ಹೆಸರು, ಚಿತ್ರ ಮತ್ತು ಧ್ವನಿಯು ಮೌಲ್ಯಯುತವಾದ ಕಾನೂನು ಹಕ್ಕುಗಳಾಗಿವೆ ಎಂದು ಮಾನ್ಯ ಮಾಡಿದೆ. ತಂತ್ರಜ್ಞಾನದ ದುರ್ಬಳಕೆಯನ್ನು ತಡೆಯಲು ಮತ್ತು ಘನತೆಗೆ ಚ್ಯುತಿ ತರುವಂತಹ ಕಂಟೆಂಟ್‌ಗಳನ್ನು ತೆಗೆದುಹಾಕಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂಬ ಕಟ್ಟುನಿಟ್ಟಿನ ಸಂದೇಶವನ್ನು ಈ ಆದೇಶವು ಸಾರುತ್ತದೆ,” ಎಂದು ತಿಳಿಸಿದ್ದಾರೆ.
ಎಐ (AI) ಟೂಲ್‌ಗಳ ಬಗ್ಗೆ ನ್ಯಾಯಾಲಯದ ಕಳವಳ
ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಕೋರಿ ಶಿಲ್ಪಾ ಶೆಟ್ಟಿ ಅವರು ನವೆಂಬರ್ 2025ರಲ್ಲಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶರ್ಮಿಳಾ ದೇಶಮುಖ್ ಅವರಿದ್ದ ಪೀಠ, ಸಂಬಂಧಪಟ್ಟ ವ್ಯಕ್ತಿಗಳ ಒಪ್ಪಿಗೆಯಿಲ್ಲದೆ ಅವರನ್ನೇ ಹೋಲುವ ಕೃತಕ ಬುದ್ಧಿಮತ್ತೆ (AI) ಟೂಲ್‌ಗಳ ಬಳಕೆಯ ಕಾನೂನುಬದ್ಧತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ನಟಿಯ ಡೀಪ್‌ಫೇಕ್‌ಗಳನ್ನು ಬಳಸುತ್ತಿರುವ ವೇದಿಕೆಗಳ ವಿರುದ್ಧ ನಿರ್ಬಂಧಗಳನ್ನು ಹೇರಬೇಕೆಂದು ಶಿಲ್ಪಾ ಪರ ವಕೀಲರು ವಾದಿಸಿದ್ದರು. ಈ ಬಗ್ಗೆ ಸಮಗ್ರ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯವು ಆಯಾ ವೇದಿಕೆಗಳಿಗೆ ಸೂಚನೆ ನೀಡಿದೆ. ಶಿಲ್ಪಾ ಶೆಟ್ಟಿ ಅವರಿಗಿಂತ ಮುಂಚಿತವಾಗಿ ಕಾಜೋಲ್, ಐಶ್ವರ್ಯಾ ರೈ ಬಚ್ಚನ್, ಶತ್ರುಘ್ನ ಸಿನ್ಹಾ, ಅಭಿಷೇಕ್ ಬಚ್ಚನ್, ಸಲ್ಮಾನ್ ಖಾನ್ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಆನ್‌ಲೈನ್ ದುರ್ಬಳಕೆಯ ವಿರುದ್ಧ ಇದೇ ರೀತಿಯ ಕಾನೂನು ಹೋರಾಟ ನಡೆಸಿ ನ್ಯಾಯಾಲಯದಿಂದ ರಿಲೀಫ್ ಪಡೆದಿದ್ದಾರೆ.
ಇದನ್ನೂ ಓದಿ : ಕೊಹ್ಲಿ ಹಾದಿಯಲ್ಲಿ ಯುವ ತಾರೆ.. ವಿಶ್ವಕಪ್ ಫೈನಲ್‌ನಲ್ಲಿ ಅಬ್ಬರಿಸಿದ ಅಭಿಷೇಕ್ ಶರ್ಮಾ ಬೆನ್ನಿಗೆ ನಿಂತ ಕ್ರಿಕೆಟ್ ದಿಗ್ಗಜರು!



















